2000 ರೂ. ಮುಖಬೆಲೆಯ ನೋಟು ರದ್ದತಿ ಇಲ್ಲ: ಸರಕಾರ

Update: 2018-03-16 14:28 GMT

ಹೊಸದಿಲ್ಲಿ, ಮಾ.16: ನವೆಂಬರ್ 2016ರಲ್ಲಿ ನೋಟು ರದ್ದತಿಯ ಬಳಿಕ ಚಲಾವಣೆಗೆ ಬಂದಿರುವ 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾವ ಪರಿಶೀಲನೆಯಲ್ಲಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.

ಅಲ್ಲದೆ 10 ರೂ. ಮುಖಬೆಲೆಯ ಪ್ಲಾಸ್ಟಿಕ್ ಕರೆನ್ಸಿ ನೋಟುಗಳನ್ನು 5 ನಗರಗಳಲ್ಲಿ ಕ್ಷೇತ್ರ ಪ್ರಯೋಗ ನಡೆಸಲು ನಿರ್ಧರಿಸಲಾಗಿದೆ ಎಂದು ಸಹಾಯಕ ವಿತ್ತ ಸಚಿವ ರಾಧಾಕೃಷ್ಣನ್ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಕೊಚ್ಚಿ, ಮೈಸೂರು, ಜೈಪುರ, ಶಿಮ್ಲ ಹಾಗೂ ಭುವನೇಶ್ವರದಲ್ಲಿ ಪ್ಲಾಸ್ಟಿಕ್ ನೋಟುಗಳ ಪ್ರಯೋಗ ನಡೆಯಲಿದೆ. ಅಗತ್ಯಸಾಮಗ್ರಿಗಳನ್ನು ಆಮದು ಮಾಡಿಕೊಂಡು ಈ ನೋಟುಗಳನ್ನು ಭಾರತದ ಪ್ರೆಸ್‌ಗಳಲ್ಲಿ ಮುದ್ರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

 ಮಹಾತ್ಮಾಗಾಂಧಿ ಸರಣಿ(ಹೊಸ)ಯಲ್ಲಿ ಮುದ್ರಿಸಲಾಗಿರುವ ನೂತನ 500 ರೂ. ಮತ್ತು 2,000 ರೂ. ಮುಖಬೆಲೆಯ ಕರೆನ್ಸಿ ನೋಟುಗಳ ಗಾತ್ರ ಕ್ರಮವಾಗಿ 66 ಮಿ.ಮೀ. -150 ಮಿ.ಮೀ ಹಾಗೂ 66 ಮಿ.ಮೀ.- 166 ಮಿ.ಮೀ. ಆಗಿದೆ. ಎರಡೂ ನೋಟುಗಳ ಗಾತ್ರದಲ್ಲಿ 10 ಮಿ.ಮೀ. ವ್ಯತ್ಯಾಸವಿರುವ ಕಾರಣ ಇವನ್ನು ಸುಲಭದಲ್ಲಿ ಗುರುತಿಸಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News