×
Ad

ಹೋಮ್ ಸ್ಟೇಯಿಂದ ಉತ್ತಮ ಆದಾಯ ಸಾಧ್ಯ: ಪ್ರಮೋದ್

Update: 2018-03-16 20:01 IST

ಉಡುಪಿ, ಮಾ.16: ಜಿಲ್ಲೆಯ ಕಡಲತೀರದ ಮನೆಗಳಲ್ಲಿ ಹೋಮ್ ಸ್ಟೇ ಆರಂಭಿಸುವುದರಿಂದ ಉತ್ತಮ ಆದಾಯ ಪಡೆಯುವುದರೊಂದಿಗೆ ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ದಿಗೊಳಿಸಲು ಸಹ ಸಾಧ್ಯವಿದೆ ಎಂದು ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಹೋಂ ಸ್ಟೇ ಪ್ರಮಾಣಪತ್ರ ಪಡೆಯಲು ಇರುವ ನಿಯಮಗಳನ್ನು ಈಗ ತೀರಾ ಸರಳಗೊಳಿಸಲಾಗಿದೆ. ಜಿಲ್ಲೆಯಲ್ಲಿ ಹೋಂ ಸ್ಟೇ ಆರಂಭಿಸುವವರಿಂದ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಿ, ಒಂದು ವಾರದೊಳಗೆ ಪ್ರಮಾಣಪತ್ರ ನೀಡಲಾಗುವುದು. ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಕಡಲ ತೀರದ ಮನೆಗಳಲ್ಲಿ ಹೋಂ ಸ್ಟೇ ಆರಂಭಿಸಿ ಪ್ರವಾಸಿಗರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಒಳ್ಳೆಯ ಆದಾಯ ಗಳಿಕೆ ಸಾಧ್ಯವಿದೆ ಎಂದರು.

ಪ್ರವಾಸಿ ಟ್ಯಾಕ್ಸಿಗಳಿಗೆ ಈವರೆಗೆ ನೀಡುತ್ತಿದ್ದ ಸಬ್ಸಿಡಿ ಮೊತ್ತವನ್ನು ಎರಡು ಲಕ್ಷ ರೂ.ನಿಂದ ಮೂರು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಅತ್ಯಂತ ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರವಾಸಿ ಟ್ಯಾಕ್ಸಿ ಪಡೆದ ಚಾಲಕರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಯ ರಾಯಭಾರಿಗಳಂತೆ ಕಾರ್ಯ ನಿರ್ವಹಿಸಬೇಕು.ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಉತ್ತಮ ಸೇವೆ ನೀಡುವುದರ ಮೂಲಕ ಅವರನ್ನು ಸಂತೃಪ್ತಗೊಳಿಸೇಕು ಎಂದು ಸಚಿವರು ನುಡಿದರು.

2017-18ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 9, ಹಿಂದುಳಿದ ಹಾಗೂ ಅಲ್ಪಸಂಖ್ಯಾತ 13 ಫಲಾನುಭವಿಗಳು ಸೇರಿದಂತೆ ಒಟ್ಟು 22 ಫಲಾನುಭವಿಗಳಿಗೆ ಟ್ಯಾಕ್ಸಿ ಹಾಗೂ ಜಿಲ್ಲೆಯ ಮೂಲೆ ಮೂಲೆಗಳ ಒಟ್ಟು 11 ಮಂದಿಗೆ ಹೋಂ ಸ್ಟೇಆರಂಭಿಸುವ ಬಗ್ಗೆ ಪ್ರಮಾಣಪತ್ರಗಳನ್ನು ಸಚಿವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ ಹಾಗೂ ವಿಲ್ಫ್ರೆಡ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News