ಮಹಾರಾಷ್ಟ್ರ: ಮಾ.18ರಿಂದ ಪ್ಲಾಸ್ಟಿಕ್ ನಿಷೇದ

Update: 2018-03-16 14:36 GMT

ಮುಂಬೈ, ಮಾ.16: ಮಹಾರಾಷ್ಟ್ರದವರ ಹೊಸ ವರ್ಷವಾಗಿರುವ ‘ಗುಡಿ ಪದ್ವ’ದ ದಿನವಾದ ಮಾ.18ರಿಂದ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇದ ಜಾರಿಗೆ ಬರಲಿದೆ ಎಂದು ಪರಿಸರ ಸಚಿವ ರಾಮದಾಸ್ ಕದಮ್ ತಿಳಿಸಿದ್ದಾರೆ.

ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಬಳಕೆ, ಸಂಗ್ರಹಣೆ, ಮಾರಾಟ, ಹಂಚಿಕೆ, ಆಮದು ಹಾಗೂ ಸಾಗಣೆಯನ್ನು ನಿಷೇಧಿಸಲಾಗಿದೆ ಎಂದು ರಾಜ್ಯದ ವಿಧಾನಸಭೆಯಲ್ಲಿ ಸಚಿವರು ಮಾಹಿತಿ ನೀಡಿದರು. ನಿಷೇಧವನ್ನು ಉಲ್ಲಂಘಿಸಿದವರಿಗೆ 25,000 ರೂ.ದಂಡ ವಿಧಿಸಲಾಗುವುದು ಹಾಗೂ 3 ವರ್ಷಗಳ ಜೈಲುಶಿಕ್ಷೆ ಕೂಡಾ ವಿಧಿಸಬಹುದಾಗಿದೆ. ಪ್ಲಾಸ್ಟಿಕ್ ಬ್ಯಾಗ್, ಥರ್ಮೋಕೋಲ್, ಬಳಸಿ ಬಿಸಾಡುವ ಲೋಟ ಹಾಗೂ ಪ್ಲೇಟ್‌ಗಳು, ನೇಯ್ಗೆ ಮಾಡದ ಪಾಲಿಪ್ರೊಪೈಲಿನ್ ಚೀಲಗಳು, ಪೌಚ್‌ಗಳು ಹಾಗೂ ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ.

ಆದರೆ ಔಷಧ, ಅರಣ್ಯ ಉತ್ಪನ್ನ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಹೊದಿಕೆಯಾಗಿ ಬಳಸುವ ಪ್ಲಾಸ್ಟಿಕ್‌ಗಳು, ಘನತ್ಯಾಜ್ಯ ನಿರ್ವಹಣೆಗೆ ಬಳಕೆಯಾಗುವ ಪ್ಲಾಸ್ಟಿಕ್, ಎಳೆಯ ಗಿಡಗಳನ್ನು ಬೆಳೆಸಲು ಬಳಸುವ ಪ್ಲಾಸ್ಟಿಕ್, ವಿಶೇಷ ಆರ್ಥಿಕ ವಲಯದಲ್ಲಿ ಪ್ಲಾಸ್ಟಿಕ್ ಬಳಕೆಗೆ ಈ ನಿಷೇದ ಅನ್ವಯಿಸುವುದಿಲ್ಲ . ಅಲ್ಲದೆ ಉತ್ಪಾದಿತ ಹಾಗೂ ಸಂಸ್ಕರಿಸಿದ ವಸ್ತುಗಳಿಗೆ ಹೊದಿಕೆ, ರ್ಯಾಪರ್‌ಗಳಿಗೆ ಬಳಸುವ ಪ್ಲಾಸ್ಟಿಕ್‌ಗೆ ನಿಷೇಧ ಅನ್ವಯಿಸುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News