×
Ad

ಉಡುಪಿ: ಅಕ್ಟೋಬರ್‌ನಲ್ಲಿ ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ಘೋಷಣೆ

Update: 2018-03-16 20:11 IST

ಉಡುಪಿ, ಮಾ.16: ಮುಂದಿನ ಅಕ್ಟೋಬರ್ ತಿಂಗಳಲ್ಲಿ ಉಡುಪಿ ಜಿಲ್ಲೆಯನ್ನು ಸ್ವಚ್ಛ ಉಡುಪಿ, ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ಘೋಷಿಸುವ ಸಂಬಂಧ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಸಮನ್ವಯ ಸಮಿತಿ ಸಭೆ ಹಾಗೂ ನೀರು ನೈರ್ಮಲ್ಯ ಸಮಿತಿ ಸಭೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ನಡೆಯಿತು.

ಜಿಲ್ಲೆಯ ಉಡುಪಿ ತಾಲೂಕಿನ ವಾರಂಬಳ್ಳಿ, ಕೊಕ್ಕರ್ಣೆ, ಕುಂದಾಪುರ ತಾಲೂಕಿನ ವಂಡ್ಸೆ, ಹಾರ್ದಳ್ಳಿ-ಮಂಡಳ್ಳಿ, ಕರ್ಕುಂಜೆ, ತ್ರಾಸಿ ಹೊಸಾಡು ಹಾಗೂ ಕಾರ್ಕಳ ತಾಲೂಕಿನ ಹೆಬ್ರಿ, ನಿಟ್ಟೆ, ಈದು, ಮುಡಾರಿನಲ್ಲಿ ಈಗಾಗಲೇ ಘನತ್ಯಾಜ್ಯ ವಿಲೇ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸಭೆಗೆ ವಿವರಿಸಿದರು.

ಮೂಲದಲ್ಲೇ ಕಸವನ್ನು ವಿಭಜಿಸಿ ಕಸಕ್ಕೆ ಮೌಲ್ಯವನ್ನು ವರ್ಧಿಸುವ ಕೆಲಸ ಹಾಗೂ ಮರುಬಳಕೆಯಿಂದಾಗಿ ಪರಿಸರ ಸ್ನೇಹಿಗಳಾಗುತ್ತೇವೆ. ನಮಗೆ ಇರುವುದೊಂದೆ ಭೂಮಿ. ಅದನ್ನು ಸಂರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಭೂಮಿಯನ್ನು ತ್ಯಾಜ್ಯದ ಗುಂಡಿಯನ್ನಾಗಿಸದೆ ತ್ಯಾಜ್ಯವನ್ನು ಸಂಪನ್ಮೂಲ ವಾಗಿಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಶೇ.95ರಷ್ಟು ಪ್ಲಾಸ್ಟಿಕ್‌ನ್ನು ಸುಡುವ ಪ್ರಕ್ರಿಯೆ ಎಸ್‌ಎಲ್‌ಆರ್‌ಎಂ ವ್ಯವಸ್ಥೆಯ ಅನುಷ್ಠಾನದ ಬಳಿಕ ನಿಂತಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ತೋಟಗಾರಿಕಾ ಇಲಾಖೆಯಲ್ಲಿ ಎಸ್‌ಎಲ್‌ಆರ್‌ಎಂ ನಿರ್ವಹಣೆಗೆ ನೀರಿನ ಸಮಸ್ಯೆ ಇದ್ದು, ಬಗೆಹರಿಸಲು ಕ್ರಿಯಾಯೋಜನೆಯಡಿ ಸೇರ್ಪಡೆಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಕೆಲವೆಡೆ ಸ್ಥಳದ ಅಭಾವ, ತುರ್ತಾಗಿ ಬಾಯ್ಲಿಂಗ್ ಮಿಷನ್ ಅಗತ್ಯದ ಬಗ್ಗೆಯೂ ಸಬೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News