10 ಕೋಟಿ ರೂ. ಪರಿಹಾರ ಕೇಳಿ 'ವಾರ್ತಾ ಭಾರತಿ' ವಿರುದ್ಧ ಸನಾತನ ಸಂಸ್ಥಾದಿಂದ ಪ್ರಕರಣ ದಾಖಲು

Update: 2018-03-16 16:09 GMT

ಮಂಗಳೂರು, ಮಾ. 16 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಸನಾತನ ಸಂಸ್ಥೆಯ ನಂಟಿದೆ ಎಂಬ ವರದಿ ಪ್ರಕಟಿಸಿರುವುದಕ್ಕೆ 10 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ 'ವಾರ್ತಾ ಭಾರತಿ' ದೈನಿಕದ ವಿರುದ್ಧ ಸನಾತನ ಸಂಸ್ಥಾ ಪ್ರಕರಣ ದಾಖಲಿಸಿದೆ. ಈ ಸಂಸ್ಥೆಯ ವಿರುದ್ಧ ಹಲವು ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಆರೋಪಗಳಿವೆ. ಗೋವಾದ ಪೊಂಡಾದ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಸನಾತನ ಸಂಸ್ಥಾ 'ವಾರ್ತಾ ಭಾರತಿ' ವಿರುದ್ಧ ಪ್ರಕರಣ ದಾಖಲಿಸಿದ್ದು , ಪತ್ರಿಕೆಯ ಸಂಪಾದಕ ಅಥವಾ ಪ್ರತಿನಿಧಿ ಹಾಜರಾಗುವಂತೆ ಪತ್ರಿಕೆಗೆ ಕೋರ್ಟ್ ಸಮನ್ಸ್ ಕಳಿಸಿದೆ. 

ಅಕ್ಟೊಬರ್ 7, 2017ರಂದು 'ವಾರ್ತಾ ಭಾರತಿ' ಮುಖಪುಟದಲ್ಲಿ "ಗೌರಿ ಲಂಕೇಶ್ ಹತ್ಯೆ ಪ್ರಕರಣ : ಐವರು ಆರೋಪಿಗಳಿಗೆ ಸನಾತನ ಸಂಸ್ಥಾ ನಂಟು?" ಎಂಬ ವರದಿ ಪ್ರಕಟವಾಗಿತ್ತು. ಸನಾತನ ಸಂಸ್ಥಾ ಜೊತೆ ನಂಟು ಹೊಂದಿದ್ದು, ಈಗ ತಲೆಮರೆಸಿಕೊಂಡಿರುವ ಐವರು ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಶಂಕಿತರ ಪಟ್ಟಿಯಲ್ಲಿದ್ದಾರೆ ಎಂದು ಈ ವರದಿಯಲ್ಲಿ ಹೇಳಲಾಗಿತ್ತು. ಈ ಸುದ್ದಿ ರಾಷ್ಟ್ರ ಮಟ್ಟದ ಪ್ರಮುಖ ಇಂಗ್ಲಿಷ್ ದೈನಿಕಗಳು ಹಾಗು ವೆಬ್ ಸೈಟ್ ಗಳಲ್ಲೂ ಪ್ರಕಟವಾಗಿತ್ತು. ಈ ಬಗ್ಗೆ ಸನಾತನ ಸಂಸ್ಥಾ ವಕೀಲರ ಹೇಳಿಕೆಯನ್ನೂ ಆ ಸುದ್ದಿಯಲ್ಲಿ ಪ್ರಕಟಿಸಲಾಗಿತ್ತು. 

ಆ ಸುದ್ದಿ ಪ್ರಕಟಿಸಿರುವುದಕ್ಕೆ 'ವಾರ್ತಾ ಭಾರತಿ' 10 ಕೋಟಿ ರೂಪಾಯಿ ಪರಿಹಾರ ಪಾವತಿಸಬೇಕು ಎಂದು ಆಗ್ರಹಿಸಿ ಸನಾತನ ಸಂಸ್ಥಾ ಪತ್ರಿಕೆಗೆ ನೋಟಿಸ್ ಕಳುಹಿಸಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಪತ್ರಿಕೆ ತಾನು ಅಧಿಕೃತ ಮೂಲಗಳಿಂದ ಸಂಗ್ರಹಿಸಿದ ಸುದ್ದಿ ಪ್ರಕಟಿಸಿದ್ದೇನೆ ಎಂದು ಹೇಳಿತ್ತು. ಇದೀಗ ಸನಾತನ ಸಂಸ್ಥಾ 'ವಾರ್ತಾ ಭಾರತಿ' ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. 

ವಿಶೇಷವೆಂದರೆ, ಸನಾತನ ಸಂಸ್ಥಾ ಪತ್ರಿಕೆ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯದಿಂದ ಸಮನ್ಸ್ ಪತ್ರಿಕೆಗೆ ತಲುಪಿದ ಶುಕ್ರವಾರವೇ ಸನಾತನ ಸಂಸ್ಥಾ ಕಾರ್ಯಕರ್ತ ಪ್ರವೀಣ್ ಲಿಮ್ಕರ್ ನನ್ನು ಗೌರಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ವಿಶೇಷ ತನಿಖಾ ತಂಡ ಗುರುತಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.  'ವಾರ್ತಾ ಭಾರತಿ' ಅಕ್ಟೊಬರ್ 7,2017 ರಂದು ಪ್ರಕಟಿಸಿದ ಸುದ್ದಿಯಲ್ಲೂ ಈತನ ಹೆಸರಿತ್ತು. 

ಈತನ ಸಹಿತ ಅಕ್ಟೊಬರ್ 19, 2009 ರಂದು ಗೋವಾದ ಮಡಗಾವ್ ನಲ್ಲಿ ದೀಪಾವಳಿ ಕಾರ್ಯಕ್ರಮವೊಂದರಲ್ಲಿ ಬಾಂಬ್ ಸ್ಫೋಟಿಸಲು ಹೋಗುತ್ತಿದ್ದಾಗ ತಮ್ಮ ಕೈಯಲ್ಲಿದ್ದ ಸ್ಪೋಟಕ ಸ್ಪೋಟಗೊಂಡು ಇಬ್ಬರು ಸನಾತನ ಸಂಸ್ಥಾ ಕಾರ್ಯಕರ್ತರು ಮೃತಪಟ್ಟ ಪ್ರಕರಣದಲ್ಲಿಯೂ ಈ ಪ್ರವೀಣ್ ಲಿಮ್ಕರ್ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ( ಎನ್ ಐ ಎ) ಮನವಿ ಮೇರೆಗೆ ಈತ ಹಾಗು ಇತರ ಮೂವರು ಸನಾತನ ಸಂಸ್ಥಾ ಕಾರ್ಯಕರ್ತರ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಾಗಿದೆ.  

ಬಾಂಬ್ ಸ್ಫೋಟ, ಕೊಲೆಗಳ ಆರೋಪ ಹೊತ್ತ ಸಂಸ್ಥೆ

ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಸಂಸ್ಥೆ ನಮ್ಮದು ಎಂದು ಹೇಳಿಕೊಳ್ಳುವ ಸನಾತನ ಸಂಸ್ಥೆ ಇತ್ತೀಚೆಗೆ ಸುದ್ದಿಯಲ್ಲಿರುವುದು ಅದರ ಮೇಲಿರುವ ಬಾಂಬ್ ಸ್ಫೋಟ ಹಾಗೂ ಕೊಲೆ ಆರೋಪಗಳಿಂದ. ಹಿರಿಯ ಕಮ್ಯುನಿಸ್ಟ್ ನಾಯಕ ಗೋವಿಂದ ಪನ್ಸಾರೆ ಅವರ ಕೊಲೆ ಪ್ರಕರಣದಲ್ಲಿ ಈ ಸಂಸ್ಥೆಯ ಡಾ. ವೀರೇಂದ್ರ ತಾವ್ಡೆ ಪ್ರಧಾನ ಸೂತ್ರಧಾರ ಎಂದು ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಹೇಳಿದೆ. ಈತನನ್ನು ಬಂಧಿಸಲಾಗಿದೆ. 2008 ರ ಜೂನ್ 4 ರಂದು ಥಾಣೆಯ ಸಭಾಂಗಣವೊಂದರಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ಈ ಸಂಸ್ಥೆಯ ವಿಕ್ರಮ್ ಭಾವೆ ಹಾಗೂ ರಮೇಶ್ ಗಡ್ಕರಿ ಎಂಬಿಬ್ಬರ ಅಪರಾಧ ಸಾಬೀತಾಗಿ ಹತ್ತು ವರ್ಷಗಳ ಶಿಕ್ಷೆಯಾಗಿದೆ. 2009 ರ ಅಕ್ಟೋಬರ್ ನಲ್ಲಿ ಗೋವಾದ ಮಡಗಾಂವ್‌ನಲ್ಲಿ ಬಾಂಬ್ ಸ್ಫೋಟಕ್ಕೆ ತಯಾರಿ ನಡೆಸುತ್ತಿದ್ದಾಗ ನಡೆದ ಸ್ಫೋಟದಲ್ಲಿ ಸನಾತನ ಸಂಸ್ಥೆಯ ಇಬ್ಬರು ಕಾರ್ಯಕರ್ತರಾದ ಮಲ್ಗೊಂಡ ಪಾಟೀಲ್ ಹಾಗೂ ಯೋಗೀಶ್ ನಾಯ್ಕೊ ಮೃತಪಟ್ಟಿದ್ದು , ಬಳಿಕ ಸಂಸ್ಥೆಯ ಇತರ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ದಾಖಲೆಗಳಲ್ಲಿದೆ. ಪನ್ವೇಲ್ , ಥಾಣೆ, ವಾಶಿಗಳಲ್ಲಿ ನಡೆದ ಬಾಂಬ್ ಸ್ಫೋಟಗಳ ಆರೋಪ ಈ ಸಂಸ್ಥೆಯ ಮೇಲಿದೆ. ವಿಚಾರವಾದಿಗಳಾದ ಗೋವಿಂದ ಪನ್ಸಾರೆ, ನರೇಂದ್ರ ದಾಭೋಲ್ಕರ್ ಹಾಗೂ ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆಗಳಲ್ಲೂ ಈ ಸಂಸ್ಥೆಯ ಪಾತ್ರವಿದೆ ಎಂದು ಆರೋಪಿಸಲಾಗಿದ್ದು ಸಂಸ್ಥೆಗೆ ಸೇರಿದ ಕೆಲವರು ಬಂಧನಕ್ಕೂ ಒಳಗಾಗಿದ್ದಾರೆ.

ಈ ಉಗ್ರ ವಿಚಾರಗಳ ಸಂಸ್ಥೆ ಕೆಲವೊಮ್ಮೆ ಬಿಜೆಪಿ, ಆರೆಸ್ಸೆಸ್ ಹಾಗು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ' ಹಿಂದೂ ವಿರೋಧಿಗಳು' ಎಂದು ಟೀಕಿಸುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News