ಜೀವನದಲ್ಲಿ ಉತ್ತಮ ಆಯ್ಕೆಗಳೊಂದಿಗೆ ಮುನ್ನಡೆಯರಿ: ಡಾ.ಎಂ.ಯಸ್.ಮೂಡಿತ್ತಾಯ
ಉಳ್ಳಾಲ,ಮಾ.16: ಆಯ್ಕೆಗಳು ಜೀವನದಲ್ಲಿ ಬೆನ್ನಟ್ಟುತ್ತಲೇ ಇರುತ್ತವೆ. ಉತ್ತಮ ಆಯ್ಕೆಗಳನ್ನು ನಡೆಸಿದಲ್ಲಿ ಯಶಸ್ಸಿನ ಹಾದಿ ಬೆನ್ನಟ್ಟಿದರೆ, ಕೆಟ್ಟ ಆಯ್ಕೆಗಳನ್ನು ಮಾಡಿದಲ್ಲಿ ಜೀವನದ ಹಾದಿ ಕೆಟ್ಟ ವಿಚಾರಗಳೇ ಬೆನ್ನಟ್ಟುತ್ತಲೇ ಇರುತ್ತವೆ. ಮಹತ್ವಾಕಾಂಕ್ಷೆ ಮತ್ತು ವಿಶ್ವಾಸಾರ್ಹತೆ ಹಾಗೂ ಉತ್ತಮ ಕಾರ್ಯದ ಮೂಲಕ ಮುನ್ನಡೆಯೋಣ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಎಂ.ಯಸ್.ಮೂಡಿತ್ತಾಯ ಹೇಳಿದರು.
ಅವರು ನಿಟ್ಟೆ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಾದ ಬಿಎಸ್ಸಿ. ಎಂಎಲ್ ಟಿ, ಬಿಎಸ್ಸಿ ಎಂಐಟಿ ಮತ್ತು ಬಿಎಸ್ಸಿ. ಎ ವಿಭಾಗಗಳ ಕಾಲೇಜು ದಿನಾಚರಣೆಯನ್ನು ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಜೀವನದಲ್ಲಿ ಕಾಲೇಜು ದಿನ ಅನ್ನುವುದು ಜೀವನದುದ್ದಕ್ಕೂ ನೆನಪಿರುವ ವಿಚಾರ. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಪ್ರತಿಭೆಗಳ ಪ್ರದರ್ಶನಗಳಿಗೆ ಕಾರ್ಯಕ್ರಮ ವೇದಿಕೆಯಾಗಿರುತ್ತದೆ, ಜೀವನದಲ್ಲಿ ಮೌಲ್ಯ ಸ್ಥಾಪನೆಗೆ ವಿಭಿನ್ನವಾಗಿ ಚಿಂತಿಸುವ ಮನೋಭಾವ ಬೆಳೆಸಿ, ವಿಫಲತೆಗಳು ಎದುರಾಗುವುದು ಸಾಮಾನ್ಯ ಆದರೆ ಯಶಸ್ಸಿನ ದೂರದೃಷ್ಟಿ ಎಂದಿಗೂ ಇರಬೇಕಾಗಿದೆ. ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗುವ ಮೂಲಕ ಇತರರನ್ನು ಆರೋಗ್ಯವಂತರಾಗಿಸಬಹುದು ಎಂದು ಹೇಳಿದರು.
ಕ್ಷೇಮ ಕಾಲೇಜಿನ ಡೀನ್ ಡಾ.ಪಿ.ಯಸ್ ಪ್ರಕಾಶ್ ಮಾತನಾಡಿ ನಿಟ್ಟೆ ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣವನ್ನು ಕಾಪಾಡಿಕೊಂಡು ಬರುವುದರ ಮೂಲಕ ಇದೀಗ ದೇಶದಾದ್ಯಂತ ವಿದ್ಯಾರ್ಥಿಗಳು ಸಂಸ್ಥೆಗೆ ಸೇರ್ಪಡೆಗೊಳ್ಳಲು ಇಚ್ಛಿಸುತ್ತಿದ್ದಾರೆ ಎಂದರು.
ಸಹ ಡೀನ್ ಡಾ.ಜಯಪ್ರಕಾಶ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ವಿದ್ಯಾರ್ಥಿನಿಯರಾದ ಲವಿಟಾ ಮತ್ತು ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು. ವಿಭಾಗ ಮುಖ್ಯಸ್ಥರುಗಳಾದ ಅರ್ಚನಾ .ಹೆಚ್ ಸ್ವಾಗತಿಸಿದರು. ಡಾ.ಶ್ರೀಪಾದ ಮೆಹಂದಲೆ ವಾರ್ಷಿಕ ವರದಿ ವಾಚಿಸಿದರು. ಡಾ.ರಘುರಾಜ್ ಯು ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.