ಕಾರಾಜೆಗೆ ಜಿ.ಪಂ. ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ಭೇಟಿ: ನಾಗರಿಕರ ಬೇಡಿಕೆ ಈಡೇರಿಸುವ ಭರವಸೆ
ಬಂಟ್ವಾಳ,ಮಾ.16: ಸಜಿಪಮೂಡ ಗ್ರಾ.ಪಂ. ವ್ಯಾಪ್ತಿಗೆ ಬರುವ ಕಾರಾಜೆ ಪ್ರದೇಶಕ್ಕೆ ಇಂದು ಭೇಟಿ ನೀಡಿದ ದ.ಕ. ಜಿ.ಪಂ. ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಸ್ಥಳೀಯ ನಾಗರಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಕಾರಾಜೆ ನೂರಾನಿಯ ಜುಮಾ ಮಸೀದಿಯ ಬಲ ಬದಿಗೆ ಇರುವ ಪ್ರದೇಶದಲ್ಲಿ ಸುಮಾರು ಮನೆಗಳಿದ್ದು, ಇಲ್ಲಿನ ನಿವಾಸಿಗಳು ಮನೆ ತಲುಪಬೇಕಾದರೆ ಅವಲಂಬಿಸಿರುವುದು ಒಂದೇ ಒಂದು ಕಾಲುದಾರಿ ಮಾತ್ರ. ಅಲ್ಲದೆ, ಅದರಲ್ಲಿ ಒಮ್ಮೆ ಒಬ್ಬರು ಮಾತ್ರ ಸರಿಯಾಗಿ ಪ್ರವೇಶಿಸಬಹುದಷ್ಟೇ. ಈ ಕಾಲುದಾರಿಯ ಪಕ್ಕದಲ್ಲಿ ಯಾವುದೇ ಸುರಕ್ಷತೆಗಳಿಲ್ಲದ ತೆರೆದ ಚರಂಡಿಯೂ ಇದೆ. ಈ ಚರಂಡಿಯಲ್ಲಿ ಸದಾ ನೀರು ತ್ಯಾಜ್ಯ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಇದೆ. ಇಲ್ಲಿ ವಾಸವಿರುವ ಮನೆಗಳಲ್ಲಿನ ಸದಸ್ಯರಿಗೆ ಅಥವಾ ಹಿರಿಯರುಗಳ ಆರೋಗ್ಯದಲ್ಲಿ ಏರುಪೇರಾದರೆ ಆಸ್ಪತ್ರೆಗೆ ಕೊಂಡೊಯ್ಯಲು ಅಥವಾ ಮರಣ ಸಂಭವಿಸಿದಲ್ಲಿ ತೆಗೆದುಕೊಂಡು ಹೋಗಲು ಸರಿಯಾದ ದಾರಿಯೇ ಇಲ್ಲವಾಗಿರುವುದರಿಂದ ಇಲ್ಲಿನ ನಿವಾಸಿಗಳಿಗೆ ಹಲವಾರು ವರ್ಷಗಳಿಂದ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ.
ಈ ಹಿಂದೆ ಮಳೆಗಾಲದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಚರಂಡಿಗೆ ಬಿದ್ದಿದ್ದರು. ಆದ್ದರಿಂದ ಸದ್ಯ ಇರುವ ತೆರೆದ ಚರಂಡಿಗೆ ವೈಜ್ಞಾನಿಕ ರೀತಿಯಲ್ಲಿ ನೀರು ಹೋಗುವಂತೆ ಪರಿಶೀಲನೆ ನಡೆಸಿ, ಸೂಕ್ತವಾದ ಚರಂಡಿ ಹಾಗೂ ರಸ್ತೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯ ನಾಗರಿಕರು ಮನವಿ ಸಲ್ಲಿಸಿದ್ದರು. ಮನವಿಯ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿದ ಅವರು, ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಬಳಿಕ ನಾಗರಿಕರೊಂದಿಗೆ ಕಾರಾಜೆಯಲ್ಲಿ ಮಾಡಲಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನೂರಾನಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಶೇಖಬ್ಬ ಹಾಜಿ, ಮಸೀದಿಯ ಖತೀಬರಾದ ಯೂಸುಫ್ ಮದನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.