ಭಿನ್ನತೆಯಲ್ಲಿ ಏಕತೆ ಪ್ರದರ್ಶಿಸೋಣ: ಅಬ್ದುಲ್ಲಾ ಮೌಲವಿ

Update: 2018-03-16 17:10 GMT

ಮಂಗಳೂರು, ಮಾ. 16: ಭಿನ್ನಾಭಿಪ್ರಾಯವನ್ನು ಮರೆತು ಮುಸ್ಲಿಮರು ಐಕ್ಯರಾಗಬೇಕಾದ ಅಗತ್ಯವಿದೆ ಎಂದು ಎಜೆಐ ಶಾಲೆ ಉಪ್ಪಳ ಇದರ ಮುಖ್ಯಸ್ಥ ಅಬ್ದುಲ್ಲಾ ಮೌಲವಿ ಕರೆ ನೀಡಿದ್ದಾರೆ.

ಯುನಿವೆಫ್ ಕರ್ನಾಟಕ ವತಿಯಿಂದ ಶುಕ್ರವಾರ ನಡೆದ ಪುರಭವನದಲ್ಲಿ ‘ಜಾತ್ಯತೀತತೆ, ರಾಷ್ಟ್ರೀಯತೆ, ಕೋಮುವಾದ’ ಎಂಬ ವಿಷಯದಲ್ಲಿ ನಡೆದ ಮುಸ್ಲಿಂ ಸಮಾವೇಶದಲ್ಲಿ ಅವರು ಮಾತನಾಡಿದರು.

ಭಿನ್ನಾಭಿಪ್ರಾಯದಿಂದಾಗಿ ಮುಸ್ಲಿಮರು ವಿವಿಧ ಪಂಗಡಗಳಾಗಿ ಹಂಚಿ ಹೋಗಿದ್ದಾರೆ. ಇಸ್ಲಾಂನ ದೃಷ್ಟಿಯಲ್ಲಿ ಮುಸ್ಲಿಮರು ಪರಸ್ಪರ ಸಹೋದರರು. ಈ ಹಿನ್ನೆಲೆಯಲ್ಲಿ ತಮ್ಮ ಸಹೋದರರ ನಡುವಿನ ಭಿನ್ನಾಭಿಪ್ರಾಯವನ್ನು ತೊರೆದು ಐಕ್ಯರಾಗಬೇಕಾಗಿರುವುದು ಇಂದಿನ ಬೇಡಿಕೆಯಾಗಿದೆ ಎಂದರು.

ಕುದ್ರೋಳಿ ಜಾಮಿಯಾ ಮಸೀದಿ ಖತೀಬ್ ಮುಫ್ತಿ ಅಬ್ದುಲ್ ಮನ್ನಾನ್ ಅವರು ಮಾತನಾಡಿ, ಸ್ವಾತಂತ್ರ ಹೋರಾಟದಲ್ಲಿ ಮುಸ್ಲಿಮರ ಪಾತ್ರವನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ. ಸ್ವಾತಂತ್ರ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸದವರು ಇಂದು ದೇಶಪ್ರೇಮದ ಮಾತುಗಳನ್ನಾಡುತ್ತಿದ್ದಾರೆ.

ಮುಸ್ಲಿಮರ ದೇಶಪ್ರೇಮವನ್ನು ಪ್ರಶ್ನಿಸಲಾಗುತ್ತಿದೆ. ಸಂವಿಧಾನಬದ್ಧ ಮುಸ್ಲಿಮರ ಹಕ್ಕುಗಳನ್ನು ಪಡೆಯಲು ನಾವು ಐಕ್ಯರಾಗಬೇಕಾದ ಅಗತ್ಯವಿದೆ ಎಂದರು.
ಪಿಎಫ್‌ಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಮಾತನಾಡಿ, ಆರೆಸ್ಸೆಸ್ ನ ಹಿಂದೂ ರಾಷ್ಟ್ರದ ಕಲ್ಪನೆ ಹಾಗೂ ಅವರ ಸಿದ್ಧಾಂತಕ್ಕೆ ಇಂದು ದೇಶದ ಹೆಚ್ಚಿನ ಮುಸ್ಲಿಮರು ಬಲಿಯಾಗುತ್ತಿದ್ದಾರೆ. ದೇಶದ ವಿವಿಧೆಡೆಗಳು ಧರ್ಮದ ಹೆಸರಿನಲ್ಲಿ ಮುಸ್ಲಿಮರ ಹತ್ಯೆಗಳಾಗುತ್ತಿವೆ. ಮುಸ್ಲಿಮರು ಭೀತಿಯ ವಾತವಾವರಣದಲ್ಲಿ ಬದುಕುವಂತಾಗಿದೆ. ದೇಶದಲ್ಲಿರುವ ಮುಸ್ಲಿಮರ ಪಾಲಿಗೆ ಕೋಮುವಾದ ದೊಡ್ಡ ಬೆದರಿಕೆಯಾಗಿದೆ. ಮುಸ್ಲಿಮರನ್ನು ಭಯದ ವಾತಾವರಣದಿಂದ ಹೊರತಂದು ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಾದ ಕಾರ್ಯ ಆಗಬೇಕಾಗಿದೆ. ಇಂತಹ ಕೆಲಸ ಮುಸ್ಲಿಮರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಾಧ್ಯವಾಗಲಿದೆ ಎಂದರು.

ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ ಸಮಾರೋಪ ಭಾಷಣ ಮಾಡಿದರು.ಪಂಪ್‌ವೆಲ್‌ನ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಮ್ತಾಝ್ ಅಲಿ, ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಮುಸ್ತಫಾ ಕೆಂಪಿ, ಮಂಗಳೂರು ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್, ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಯು.ಎಚ್.ಉಮರ್, ಯುನಿವೆಫ್ ಕರ್ನಾಟಕದ ಕಾರ್ಯದರ್ಶಿ ಯು.ಕೆ. ಖಾಲಿದ್, ಜಿಲ್ಲಾಧ್ಯಕ್ಷ ಸೈಫುದ್ದೀನ್ ಕುದ್ರೋಳಿ, ಜಮೀಯ್ಯತುಲ್ ಫಲಾಹ್ ದ.ಕ. ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್, ಮುಲ್ಕಿ ಶಾಫಿ ಜುಮಾ ಮಸೀದಿ ಅಧ್ಯಕ್ಷ ಇಕ್ಬಾಲ್ ಮುಲ್ಕಿ, ಮೊದಲಾದವರು ಉಪಸ್ಥಿತರಿದ್ದರು.

ಝುಲ್ಫಿಕರ್ ಮತ್ತು ತಂಡದಿಂದ ಸಂಘಟನಾ ಗೀತೆಯ ವಾಚನ ನಡೆಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News