ಮಾಲ್ದೀವ್ಸ್ ಪ್ರತಿಪಕ್ಷ ನಾಯಕರಿಂದ ಅಮೆರಿಕ ಅಧಿಕಾರಿಗಳ ಭೇಟಿ
ವಾಶಿಂಗ್ಟನ್, ಮಾ. 16: ಮಾಲ್ದೀವ್ಸ್‌ನ ಪ್ರತಿಪಕ್ಷ ನಾಯಕರು ಗುರುವಾರ ವಾಶಿಂಗ್ಟನ್‌ನಲ್ಲಿ ಅಮೆರಿಕದ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರದಲ್ಲಿ ಈಗ ನೆಲೆಸಿರುವ ಬಿಕ್ಕಟ್ಟು ಹಿಂದೂ ಮಹಾಸಾಗರದ ಭದ್ರತಾ ಬೆದರಿಕೆಯಾಗಿ ಪರಿಣಮಿಸದಂತೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಅಮೆರಿಕದ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಮಾಲ್ದೀವ್ಸ್‌ನಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಹೆಚ್ಚುತ್ತಿರುವ ಪ್ರಭಾವದ ಬಗ್ಗೆಯೂ ಮಾಲ್ದೀವ್ಸ್ ಪ್ರತಿಪಕ್ಷ ನಾಯಕರು ಚರ್ಚಿಸಿದರು. ಪರಿಸ್ಥಿತಿಯನ್ನು ಸುಧಾರಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ದೇಶವು ಇಸ್ಲಾಮಿಕ್ ಸ್ಟೇಟ್ ಸದಸ್ಯರ ‘ಉತ್ಪಾದನಾ ಕೇಂದ್ರ’ವಾಗಬಹುದು ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
ಮಾಲ್ದೀವ್ಸ್‌ನ ಪ್ರತಿಪಕ್ಷ ನಾಯಕರ ನಿಯೋಗದ ನೇತೃತ್ವವನ್ನು ವಹಿಸಿರುವ ಮಾಜಿ ವಿದೇಶ ಸಚಿವ ಅಹ್ಮದ್ ನಸೀಮ್‌ರನ್ನು ವಿದೇಶಾಂಗ ಇಲಾಖೆ ಅಧಿಕಾರಿಗಳು ಗುರುವಾರ ಭೇಟಿಯಾಗಿದ್ದಾರೆ ಎನ್ನವುದನ್ನು ವಿದೇಶಾಂಗ ಇಲಾಖೆ ಖಚಿತಪಡಿಸಿದೆ.
‘‘ಮಾಲ್ದೀವ್ಸ್‌ನಲ್ಲಿ ಈಗ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ಅವರು ಮಾತುಕತೆ ನಡೆಸಿದ್ದಾರೆ’’ ಎಂದು ವಿದೇಶಾಂಗ ಇಲಾಖೆ ವಕ್ತಾರರು ಹೇಳಿದರು. ಆದರೆ, ಮಾತುಕತೆಯ ವಿವರಗಳನ್ನು ನೀಡಲು ಅವರು ನಿರಾಕರಿಸಿದರು.