ರಾಜ್ಯದ 5 ಕ್ಷೇತ್ರಗಳಲ್ಲಿ ಕ್ರೈಸ್ತ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಇಫ್ಕಾ ಆಗ್ರಹ
ಉಡುಪಿ, ಮಾ.19: ಮುಂಬರುವ ಚುನಾವಣೆಯಲ್ಲಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಸೇರಿದಂತೆ ರಾಜ್ಯದ ಐದು ಕ್ಷೇತ್ರಗಳಲ್ಲಿ ಕ್ರೈಸ್ತ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡ ಬೇಕೆಂದು ಕರ್ನಾಟಕ ರಾಜ್ಯ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟ (ಇಫ್ಕಾ) ಆಗ್ರಹಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರಶಾಂತ್ ಜತ್ತನ್ನ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕ್ರೈಸ್ತರ ಮತ ನಿರ್ಣಯಕ ಮಟ್ಟದಲ್ಲಿದ್ದರೂ ಸಮುದಾಯಕ್ಕೆ ಅರ್ಹ ರಾಜಕೀಯ ಪ್ರಾತಿನಿಧ್ಯ ದೊರಕಿಲ್ಲ. ರಾಜ್ಯದ ಏಳು ಕ್ಷೇತ್ರಗಳಲ್ಲಿ ಕ್ರೈಸ್ತ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದಾರೆ ಎಂದರು.
ಬೆಂಗಳೂರು ಜಿಲ್ಲೆಯ ಎರಡು, ಬೀದರ್ ಜಿಲ್ಲೆಯ ಎರಡು, ದ.ಕ. ಜಿಲ್ಲೆಯ ಎರಡು, ಉಡುಪಿಯಲ್ಲಿ ಒಂದು ಕ್ಷೇತ್ರಗಳಲ್ಲಿ ಕ್ರೈಸ್ತ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸುವಂತಹ ಅವಕಾಶಗಳಿವೆ. ಈ ಎಲ್ಲ ಕ್ಷೇತ್ರಗಳಲ್ಲಿ ಅಲ್ಪ ಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕ್ರೈಸ್ತರು ಶೇ.25ರಷ್ಟಿಕ್ಕಿಂತ ಹೆಚ್ಚಿದ್ದಾರೆ. ಆದುದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಏಳರಲ್ಲಿ ಐದು ಕ್ಷೇತ್ರಗಳಲ್ಲಾದರೂ ಕ್ರೈಸ್ತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಬೆಂಗಳೂರು ಸರ್ವಜ್ಞನಗರ ಕ್ಷೇತ್ರದಲ್ಲಿ ಕೆ.ಜೆ.ಜಾರ್ಜ್, ಮೂಡಬಿದ್ರೆ -ಮುಲ್ಕಿ ಕ್ಷೇತ್ರದಲ್ಲಿ ಐವನ್ ಡಿಸೋಜ, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜೆ.ಆರ್.ಲೋಬೊ, ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಡೇವಿಡ್ ಸಿಮಿಯೋನ್ ಅಭ್ಯರ್ಥಿ ಸ್ಥಾನಕ್ಕೆ ಉಮೇದ್ವಾರಿಕೆಯನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಸಲ್ಲಿಸಿ ದ್ದಾರೆ. ಮುಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಅಭಯಚಂದ್ರ ಜೈನ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದುದರಿಂದ ಕ್ಷೇತ್ರ ಇನ್ನೂ ಹೆಚ್ಟಿನ ಅಭಿವೃದ್ಧಿಗಾಗಿ ಐವನ್ ಡಿಸೋಜ ಸೂಕ್ತ ವ್ಯಕ್ತಿಯಾಗಿದ್ದು, ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಡಾ.ನೇರಿ ಕರ್ನೆಲಿಯೋ, ನಿಕಟ ಪೂರ್ವ ಅಧ್ಯಕ್ಷ ಲೂಯಿಸ್ ಲೋಬೊ, ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್, ಕಾರ್ಯಕಾರಿ ಸಮಿತಿ ಸದಸ್ಯ ಸುನೀಲ್ ಕಬ್ರಾಲ್ ಉಪಸ್ಥಿತರಿದ್ದರು.