ಮಾ.22,23: ಎಂಆರ್‌ಪಿಎಲ್ ಕಂಪೆನಿಗೆ ಬೀಗ ಜಡಿಯಲು ಒತ್ತಾಯಿಸಿ ಧರಣಿ

Update: 2018-03-19 11:21 GMT

ಮಂಗಳೂರು, ಮಾ.19: ಕೋಕ್ ಸಲ್ಫರ್ ಘಟಕದ ಮಾಲಿನ್ಯದಿಂದ ಕಂಗೆಟ್ಟಿರುವ ಸ್ಥಳೀಯ ಗ್ರಾಮಗಳ ಪರಿಸ್ಥಿತಿ ಸರಿಪಡಿಸಲು ಸರಕಾರ ಹೊರಡಿಸಿರುವ ಆದೇಶ ಧಿಕ್ಕರಿಸುತ್ತಿರುವ ಮತ್ತು ಉದ್ಯೋಗ ಸೃಷ್ಟಿಸದ ಹಾಗೂ ಮತ್ತೆ ನೂರಾರು ಎಕರೆ ಭೂಮಿ ವಶಪಡಿಸಲು ಯತ್ನಿಸುತ್ತಿರುವ ಎಂಆರ್‌ಪಿಎಲ್ ಕಂಪೆನಿಯ ವಿಸ್ತರಣೆಗೆ ಅವಕಾಶ ನೀಡಬಾರದು, ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಈ ಕಂಪೆನಿಗೆ ಬೀಗ ಜಡಿಯಬೇಕು ಎಂಬ ಆಗ್ರಹಿಸಿ ಮಾ.22, 23ರಂದು ಎಂಆರ್‌ಪಿಎಲ್ ಪ್ರಧಾನ ದ್ವಾರದ ಮುಂಭಾಗ ಹಗಲು ರಾತ್ರಿ ಧರಣಿ ನಡೆಸಲು ಜೋಕಟ್ಟೆಯ ನಾಗರಿಕ ಹೋರಾಟ ಸಮಿತಿ ಹಾಗೂ ಸುರತ್ಕಲ್‌ನ ಎಂಆರ್‌ಪಿಎಲ್ ವಿರೋಧಿ ಸಮಿತಿ ನಿರ್ಧರಿಸಿದೆ.

ಎಂಅರ್‌ಪಿಎಲ್ ಮೂರನೇ ಹಂತದ ಪೆಟ್‌ಕೋಕ್ ಸಲ್ಫರ್ ಘಟಕದ ಮಾಲಿನ್ಯದ ವಿರುದ್ಧ ಜೋಕಟ್ಟೆ, ಕಳವಾರು ಗ್ರಾಮಸ್ಥರ ಸತತ ಹೋರಾಟದಿಂದಾಗಿ ರಾಜ್ಯ ಸರಕಾರ ಆರು ಅಂಶಗಳ ಪರಿಹಾರ ಕ್ರಮಕೈಗೊಳ್ಳುವಂತೆ ಸೂಚಿಸಿ ಎಂಆರ್‌ಪಿಎಲ್ಗೆ ಆದೇಶ ಹೊರಡಿಸಿತ್ತು. ಆದರೆ ಕಂಪೆನಿಯು ಆದೇಶ ಹೊರಡಿಸಿ ಎರಡು ವರ್ಷಗಳಾದರೂ ಪರಿಹಾರ ಕ್ರಮಗಳನ್ನು ಕೈಗೊಳ್ಳದೆ ಜನರನ್ನು ವಂಚಿಸಿದೆ. ಅದಲ್ಲದೆ ಕಂಪೆನಿಯು ಮತ್ತೆ 811 ಎಕರೆ ಕೃಷಿ ಭೂಮಿಯನ್ನು ಬಲವಂತದಿಂದ ವಶಕ್ಕೆ ಪಡೆದು ನಾಲ್ಕನೆ ಹಂತದ ವಿಸ್ತರಣಾ ಘಟಕ ಸ್ಥಾಪಿಸಲು ಯತ್ನಿಸುತ್ತಿದೆ. ಕಂಪೆನಿಯು ತನ್ನ ವಾಗ್ದಾನದಂತೆ ಉದ್ಯೋಗವನ್ನು ಸೃಷ್ಟಿಸುವುದರಲ್ಲಿ ವಿಫಲವಾಗಿದೆ. ಬದಲಿಗೆ ಸುತ್ತಲಿನ ಹತ್ತಾರು ಗ್ರಾಮಗಳು ಕೆಮಿಕಲ್ ಮಾಲಿನ್ಯದಿಂದ ಬಳಲುವಂತೆ ರೋಗಪೀಡಿತರಾಗುವಂತೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಸರಕಾರದ ಆದೇಶ ಪಾಲಿಸದ, ಮಾಲಿನ್ಯ ತಡೆಯದ, ಉದ್ಯೋಗ ಸೃಷ್ಟಿಸದ, ಮತ್ತೆ ಭೂಮಿ ಕಬಳಿಸಲು ಯತ್ನಿಸುತ್ತಿರುವ ಎಂಆರ್‌ಪಿಎಲ್ ಕಂಪೆನಿಗೆ ಬೀಗ ಜಡಿಯಲು ಒತ್ತಾಯಿಸಿ ಹಗಲು ರಾತ್ರಿ ಧರಣಿ ನಡೆಸಲಾಗುವುದು ಎಂದು ಸಮಿತಿಯ ಮುಖಂಡ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News