ಮಾ.21: ಬಿ.ಸಿ.ರೋಡ್‌ನಲ್ಲಿ ಝಕಾತ್ ಸೆಮಿನಾರ್

Update: 2018-03-19 11:22 GMT

ಮಂಗಳೂರು, ಮಾ.19: ದ.ಕ. ಜಿಲ್ಲಾ ಫೈಝೀಸ್ ಅಸೋಸಿಯೇಶನ್ ವತಿಯಿಂದ ಮಾ.21ರಂದು ಬೆಳಗ್ಗೆ 10 ಗಂಟೆಗೆ ಬಿ.ಸಿ. ರೋಡಿನ ಲಯನ್ಸ್ ಕ್ಲಬ್‌ನಲ್ಲಿ ಝಕಾತ್ ಸೆಮಿನಾರ್ ಮತ್ತು ಸಂಶಯ ನಿವಾರಣೆ ಕಾರ್ಯಕ್ರಮ ನಡೆಯಲಿದೆ ಎಂದು ಫೈಝೀಸ್ ಎಸೋಸಿಯೇಶನ್‌ನ ಸಂಘಟನಾ ಕಾರ್ಯದರ್ಶಿ ಎ.ಎಂ. ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಸ್ಲಾಮಿನ ಪಂಚ ಆಚಾರಗಳಲ್ಲಿ ಮೂರನೇಯದ್ದಾದ ಝಕಾತ್ ಅಥವಾ ಕಡ್ಡಾಯ ದಾನದ ಕುರಿತು ಶಿಬಿರ ನಡೆಯಲಿದೆ. ಪಿಎಫ್, ಲೀಸ್, ಫಿಕ್ಸೆಡ್ ಡಿಪಾಸಿಟ್, ಎಸ್.ಬಿ. ಅಕೌಂಟ್, ಕಮಿಶನ್ ಏಜೆನ್ಸ್, ಶೇರು ಮಾರ್ಕೆಟ್, ರಿಯಲ್ ಎಸ್ಟೇಟ್ ಮುಂತಾದ ಆಧುನಿಕ ವ್ಯವಹಾರದಲ್ಲಿರುವ ಝಕಾತ್ ಕುರಿತು ಉಂಟಾಗುವ ಸಮಸ್ಯೆಗಳ ನಿವಾರಣೆ ಕೂಡ ನಡೆಯಲಿದೆ ಎಂದು ಹೇಳಿದರು.

ಕಡ್ಡಾಯ ದಾನ ಪಡೆಯುವ ಅರ್ಹತೆ ಮತ್ತು ಎಷ್ಟು ನೀಡಬೇಕು? ಯಾವಾಗ ನೀಡಬೇಕು? ಮುಂತಾದ ವಿಚಾರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಪ್ರತಿಭೆ ಪಟ್ಟಿಕ್ಕಾಡ್ ಜಾಮಿಅಃ ನೂರಿಯ್ಸ ಅರಬಿಕ್ ಕಾಲೇಜಿನ ಪ್ರೊ.ಳಿಯಾಲುದ್ದೀನ್ ಫೈಝಿ ಮಂಡಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷ ಮಿತ್ತಬೈಲು ಜಬ್ಬಾರ್ ಉಸ್ತಾದ್ ದುಆ ನೆರವೇರಿಸಲಿದ್ದಾರೆ. ದ.ಕ. ಜಿಲ್ಲಾ ಖಾಝಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಫೈಝೀಸ್ ಜಿಲ್ಲಾಧ್ಯಕ್ಷ ಹಾಜಿ ಉಮರ್ ಫೈಝಿ ಸಾಲ್ಮರ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಶರೀಫ್ ಫೈಝಿ ಕಡಬ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಈ ಸಂದರ್ಭ ಕಾರ್ನಾಟಕ ರಾಜ್ಯ ಫೈಝೀಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಾಜಿ ಕೆ.ಎಂ. ಉಸ್ಮಾನುಲ್ ಫೈಝಿ ತೋಡಾರು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಫೈಝಿ ಅಸೋಸಿಯೇಶನ್‌ನ ಜಿಲ್ಲಾ ಅಧ್ಯಕ್ಷ ಹಾಜಿ ಎಸ್.ಪಿ. ಉಮರ್ ಫೈಝಿ ಸಾಲ್ಮರ, ಪ್ರಧಾನ ಕಾರ್ಯದರ್ಶಿ ಹಾಜಿ ಶರೀಫ್ ಫೈಝಿ ಕಡಬ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News