ಕುಕ್ಕೆಹಳ್ಳಿ ಫಿಶ್‌ಮಿಲ್ ಸಮಸ್ಯೆ ಪರಿಹರಿಸದಿದ್ದರೆ ಚುನಾವಣೆ ಬಹಿಷ್ಕಾರ

Update: 2018-03-19 12:12 GMT

ಉಡುಪಿ, ಮಾ.19: ಕುಕ್ಕೆಹಳ್ಳಿ ಗ್ರಾಪಂ ವ್ಯಾಪ್ತಿಯ ಬೆಳ್ಳಂಪಳ್ಳಿ ಗ್ರಾಮದ ಪುಣ್ಚೂರಿನಲ್ಲಿರುವ ಮೀನು ಸಂಸ್ಕರಣಾ ಘಟಕದ ತ್ಯಾಜ್ಯದಿಂದ ಸ್ಥಳೀಯ ಮನೆಗಳ ಬಾವಿಗಳ ನೀರು ಕುಲುಷಿತಗೊಂಡಿದ್ದು, ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪುಣ್ಚೂರು, ಚೋಳೆಬೆಟ್ಟು, ಬಾಯರ್‌ಬೆಟ್ಟು ಗ್ರಾಮಸ್ಥರು, ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕುಡಿಯುವ ನೀರಿನ ಮಾಲಿನ್ಯ ಮಾಡುತ್ತಿರುವ ಪುಣ್ಚೂರಿನ ಕರಾವಳಿ ಫ್ರೀಜರ್ಸ್‌ ಆ್ಯಂಡ್ ಎಕ್ಸ್‌ಪೋರ್ಟ್ ಮೀನು ಸಂಸ್ಕರಣ ಘಟಕವನ್ನು ಮುಚ್ಚುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ನೆಲಜಲ ಪರಿಸರ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಗ್ರಾಮಸ್ಥರು ಕುಕ್ಕೆಹಳ್ಳಿ ಗ್ರಾಪಂ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಕ್ಕೆಹಳ್ಳಿಯ ಮರಾಠಿ ಮುಖಂಡ ಸಂಜೀವ ನಾಯ್ಕ ಚೋಳೆಬೆಟ್ಟು ‘2011ರಲ್ಲಿ ಸ್ಥಾಪನೆಗೊಂಡಿರುವ ಈ ಘಟಕ ದಿಂದ ಸುತ್ತಲಿನ ಗ್ರಾಮಸ್ಥರ ಮನೆಗಳ ಬಾವಿ ನೀರು ಹಾಳಾಗಿದ್ದು, ಹಲವು ಮಂದಿ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಸಮಸ್ಯೆಯಿಂದ ಅಲ್ಲಿನ ಶೇ.90ರಷ್ಟಿರುವ ಎಸ್‌ಸಿಎಸ್‌ಟಿ ಸಮುದಾಯದವರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ’ ಎಂದು ಆರೋಪಿಸಿದರು.

ಎರಡೂ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಇಲ್ಲಿನ ಸಮಸ್ಯೆಗೆ ಈವರೆಗೆ ಸ್ಪಂದಿಸಿಲ್ಲ. ಈ ಬಾರಿ ಇಲ್ಲಿನ ಸಮಸ್ಯೆ ಪರಿಹರಿಸದಿದ್ದರೆ ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಮಲಮಜಲು ಪುಣ್ಚೂರು, ಚೋಳೆಬೆಟ್ಟು ಹಾಗೂ ಉಡುಪಿ ಕ್ಷೇತ್ರ ವ್ಯಾಪ್ತಿಯ ಬಾಯರ್‌ಬೆಟ್ಟುವಿನ ಸುಮಾರು 2000 ಮತದಾರರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದರು.

‘ಕಜ್ಜಿ, ಅಲರ್ಜಿ ಕಾಯಿಲೆಗೆ ಹಲವು ಸಮಯದಿಂದ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ರಕ್ತ ಪರೀಕ್ಷೆ ಮಾಡಿ ವರದಿ ನೀಡಿದ್ದಾರೆ. ಅದರಲ್ಲಿ ಈ ಸಮಸ್ಯೆ ಕುಡಿಯುವ ನೀರಿನಿಂದ ಬಂದಿರುವುದಾಗಿ ಹೇಳಿದ್ದಾರೆ. ಇದಕ್ಕೆಲ್ಲ ಫಿಶ್‌ಮಿಲ್‌ನ ತ್ಯಾಜ್ಯ ನೀರೆ ಕಾರಣ. ಇದೀಗ ನನ್ನ ಮಗಳಿಗೂ ಸಮಸ್ಯೆ ಕಾಡುತ್ತಿದೆ’ ಎಂದು ಪುಣ್ಚೂರಿನ ಪುಷ್ಪ ನಾಯ್ಕ್ ದೂರಿದರು.

‘ಪರಿಸರದ ನೀರು ಹಾಳಾಗಿ ಮಳೆಗಾಲದಲ್ಲಿ ತುಂಬಾ ತೊಂದರೆಯಾಗುತ್ತಿದೆ. ಕೃಷಿ ಹಾಗೂ ಹೈನುಗಾರಿಕೆಗೂ ಇದರ ಪರಿಣಾಮ ತಟ್ಟಿದೆ. ಜಾನುವಾರುಗಳು ಕಲುಷಿತ ನೀರು ಕುಡಿದು ರೋಗಕ್ಕೆ ತುತ್ತಾಗಿವೆ. ಕಳೆದ ಏಳು ವರ್ಷಗಳಿಂದ ಈ ಸಮಸ್ಯೆಯನ್ನು ಎದುರಿಸಿಕೊಂಡು ಬರುತ್ತಿದ್ದೇವೆ’ ಎಂದು ಆಶಾ ಶೆಟ್ಟಿ ತಮ್ಮ ಅಳಲನ್ನು ತೋಡಿಕೊಂಡರು.

ಬಳಿಕ ಗ್ರಾಪಂಗೆ ಮನವಿ ಸಲ್ಲಿಸಿದ ಧರಣಿನಿರತರು, ಘಟಕದ ಪಂಚಾಯತ್ ನೀಡಿರುವ ಪರವಾನಿಗೆ, ವಿದ್ಯುತ್ ಸಂಪರ್ಕ ನೀಡಲು ನಿರಾಕ್ಷೇಪಣಾ ಪತ್ರಗಳನ್ನು ಪುನರ್‌ಪರಿಶೀಲಿಸಬೇಕು. ಸರಕಾರಿ ಜಾಗದ ಅತಿಕ್ರಮಣವನ್ನು ಪರಿಶೀಲನೆ ಮಾಡಬೇಕು. ಸಾರ್ವಜನಿಕ ಕುಡಿಯುವ ನೀರಿನ ಬಾವಿ ಹಾಗೂ ಹೊಳೆಯ ನೀರನ್ನು ಪರೀಕ್ಷೆಗೊಳಪಡಿಸಿ ವರದಿ ನೀಡಬೇಕೆಂದು ಒತ್ತಾಯಿಸಿದರು.

ಧರಣಿಯಲ್ಲಿ ವೇದಿಕೆಯ ರಾಜ್ಯಾಧ್ಯಕ್ಷೆ ಶ್ರೀಲತಾ ಶೆಟ್ಟಿ, ದಲಿತ ಮುಖಂಡ ಅಂಬಲಪಾಡಿ ಉಮೇಶ್ ಕುಮಾರ್, ನಿತ್ಯಾನಂದ ಶೆಟ್ಟಿ, ಗ್ರಾಮದ ಹಿರಿಯ ರಾಮಚಂದ್ರ ಭಟ್, ಚೇರ್ಕಾಡಿ ಗದ್ದಿಗೆ ಅಮ್ಮನವರ ದೇವಸ್ಥಾನದ ಅಧ್ಯಕ್ಷ ಗಣೇಶ್ ನಾಯ್ಕ, ಕೆ.ಕೆ.ನಾಯ್ಕ ಬಾರಕೂರು, ಚಿತ್ತರಂಜನ್‌ದಾಸ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಬಾವಿ ನೀರು ಕಲುಷಿತ: ಗ್ರಾಪಂ ಅಧ್ಯಕ್ಷೆ
ಸಾರ್ವಜನಿಕರಿಂದ ಬಂದ ದೂರಿನಂತೆ ಸ್ಥಳ ಪರಿಶೀಲನೆ ಮಾಡಿದ್ದೇವೆ. ಇಲ್ಲಿ ಗ್ರಾಮಸ್ಥರ ಬಾವಿಗಳ ನೀರು ಹಾಳಾಗಿರುವುದು ಕಂಡುಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಗ್ರಾಪಂನಿಂದ ಪತ್ರ ಬರೆಯಲಾಗಿದೆ ಎಂದು ಕುಕ್ಕೆಹಳ್ಳಿ ಗ್ರಾಪಂ ಅಧ್ಯಕ್ಷೆ ಆಶಾ ಲತಾ ಶೆಟ್ಟಿ ತಿಳಿಸಿದ್ದಾರೆ.

ಫಿಶ್‌ಮಿಲ್ ಸಮಸ್ಯೆ ಕುರಿತು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಪರಿಸರ ಇಲಾಖೆಗೆ ಪತ್ರ ಬರೆಯಲಾಗಿದ್ದು, ಎರಡು ತಿಂಗಳ ಹಿಂದೆ ಪರಿಸರ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫಿಶ್‌ಮಿಲ್ ನಲ್ಲಿರುವ ಶುದ್ಧೀಕರಣ ಘಟಕವು ಸಾಮರ್ಥ್ಯ ಕಳೆದುಕೊಂಡ ಪರಿಣಾಮ ಬಾವಿ ಗಳ ನೀರು ಹಾಳಾಗಿದೆ ಎಂದು ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News