ರಷ್ಯಾ ಅಧ್ಯಕ್ಷರಾಗಿ ಪುಟಿನ್ ಪುನರಾಯ್ಕೆ

Update: 2018-03-19 17:01 GMT

 ಮಾಸ್ಕೊ,ಮಾ.19: ರಶ್ಯದ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾದಿಮಿರ್ ಪುಟಿನ್‌ಗೆ ಪ್ರಚಂಡ ಗೆಲುವು ದೊರೆತಿದ್ದು, ಮತ್ತೊಮ್ಮೆ ಆರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ ಪುಟಿನ್ ವಂಚನೆಯಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆಂದು ಅವರ ವಿರೋಧಿಗಳು ಆರೋಪಿದ್ದಾರೆ.

     ಚುನಾವಣೆಯಲ್ಲಿ ಪುಟಿನ್ ಅವರಿಗೆ ಶೇ. 76ರಷ್ಟು ಮತಗಳು ದೊರೆತಿದ್ದು, ಅವರ ನಿಕಟ ಸ್ಪರ್ಧಿಯಾದ ರಶ್ಯನ್ ಕಮ್ಯೂನಿಸ್ಟ್ ಪಾರ್ಟಿಯ ನಾಯಕ ಪವೆಲ್ ಗ್ರೂಡಿನ್‌ಗೆ ಶೇ. 13ರಷ್ಟು ಮತಗಳು ಮಾತ್ರವೇ ಲಭಿಸಿದೆ. ಪುಟಿನ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಇದು 4ನೆ ಸಲವಾಗಿದ್ದು, ಅವರು 2024ರವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಲಿಬರಲ್ ಡೊಮಾಕ್ರಟಿಕ್ ಪಕ್ಷದ ನಾಯಕ ವ್ಲಾದಿಮಿರ್ ಶಿರಿನೋವ್‌ಸ್ಕಿಗೆ ಶೇ. 6ರಷ್ಟು ಮತಗಳು ದೊರೆತಿದ್ದು, ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಪುಟಿನ್ ಅವರ ರಾಜಕೀಯ ಗುರುವೆಂದೇ ಪರಿಗಣಿಸಲ್ಪಟ್ಟಿರುವ ಅನಾಟೊಲಿ ಸೊಬ್‌ಚಾಕ್ ಅವರ ಪುತ್ರಿ ಸಿನಿಯಾ ಸೊಬ್‌ಚಾಕ್‌ಗೆ ಕೇವಲ 2 ಶೇ.ಮತಗಳು ಲಭಿಸಿವೆ. ಕಮ್ಯೂನಿಸ್ಟ್ ಆಫ್ ರಶ್ಯದ ಅಭ್ಯರ್ಥಿ ಮಾಕ್ಸಿಂ ಸೂರ್ಯಾಕಿ ಕೇವಲ 0.6 ಶೇ.ಮತಗಳನ್ನು ಪಡೆದುಕೊಂಡಿದ್ದಾರೆ.

ಸುಮಾರು ಎರಡು ದಶಕಗಳಿಂದ ಅಧಿಕಾರದಲ್ಲಿರುವ ಪುಟಿನ್, ಜೋಸೆಫ್ ಸ್ಟಾಲಿನ್ ಬಳಿಕ ರಶ್ಯದ ಅತ್ಯಂತ ದೀರ್ಘಾವಧಿಯ ಅಧ್ಯಕ್ಷನೆಂಬ ದಾಖಲೆಯನ್ನು ಸ್ಥಾಪಿಸಿದ್ದಾರೆ. ತನ್ನನ್ನು ಪ್ರಚಂಡ ಬಹುಮತದೊಂದಿಗೆ ಪುನರಾಯ್ಕೆ ಮಾಡಿರುವ ರಶ್ಯದ ಜನತೆಯನ್ನು ಪುಟಿನ್ ಅಭಿನಂದಿಸಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಮಾಸ್ಕೊದಲ್ಲಿ ನಡೆದ ವಿಜಯೋತ್ಸವ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು ಕಳೆದ ಕೆಲವು ವರ್ಷಗಳಲ್ಲಿ ರಶ್ಯವು ಸಾಧಿಸಿದ ಪ್ರಗತಿಯನ್ನು ಜನತೆ ಗಮನಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಣೆಗಾರಿಕೆಯೊಂದಿಗೆ ದೇಶವನ್ನು ಮುನ್ನಡೆಸುವುದಾಗಿ ಪುತಿನ್ ಹೇಳಿದ್ದಾರೆ.

ಉಕ್ರೇನ್ ಹಾಗೂ ಸಿರಿಯಗಳಲ್ಲಿ ನಡೆಯುತ್ತಿರುವ ಅಂತರ್ಯದ್ಧದಲ್ಲಿ ಮಧ್ಯಪ್ರವೇಶಿಸಿರುವುದಕ್ಕಾಗಿ ಮಾಸ್ಕೊ ಜಾಗತಿಕ ಮಟ್ಟದಲ್ಲಿ ವಿರೋಧವನ್ನು ಎದುರಿಸುತ್ತಿದೆ. ಈ ಮಧ್ಯೆ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದೆಯೆಂಬ ಆರೋಪಗಳು ಕೂಡಾ ಪುಟಿನ್ ಸರಕಾರವನ್ನು ವಿವಾದದ ಸುಳಿಗೆ ಸಿಲುಕಿಸಿತ್ತು. ಇತ್ತೀಚೆಗೆ ಬ್ರಿಟನ್‌ನಲ್ಲಿ ರಶ್ಯದ ಡಬಲ್ ಏಜೆಂಟ್ ಒಬ್ಬಾತನಿಗೆ ವಿಷಪ್ರಾಶನದ ಘಟನೆಯಲ್ಲಿಯೂ ಪುಟಿನ್ ಸರಕಾರ ಕೈವಾಡವಿದೆಯೆಂದು ಆರೋಪಿಸಲಾಗಿತ್ತು. ಆದರೆ ಈ ಎಲ್ಲಾ ವಿವಾದಗಳನ್ನು ಮೀರಿ ಪುಟಿನ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವುದು ರಾಜಕೀಯ ಸಮೀಕ್ಷಕರನ್ನು ಅಚ್ಚರಿಗೀಡುಮಾಡಿದೆ.

 ಈ ಮಧ್ಯೆ ಪುಟಿನ್ ಅವರ ಪ್ರಬಲ ವಿರೋಧಿ ನವಾಲ್ನಿ ಅವರು ರಶ್ಯದ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದಾಗಿ ಆಪಾದಿಸಿದ್ದಾರೆ. ಮತದಾನ ವೇಳೆ ವ್ಯಾಪಕವಾಗಿ ಚುನಾವಣಾ ನೀತಿ ಸಂಹಿತೆಗಳನ್ನು ಉಲ್ಲಂಘಿಸಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲು ತಾನು ರಾಷ್ಟ್ರದಾದ್ಯಂತ 33 ಸಾವಿರ ವೀಕ್ಷಕರನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ.

 ನಕಲಿ ಮತದಾನ, ಒಬ್ಬನೇ ಮತದಾರನಿಂದ ಹಲವು ಬಾರಿಮತದಾನ ಸೇರಿದಂತೆ ವ್ಯಾಪಕವಾಗಿ ಚುನಾವಣಾ ಆಕ್ರಮಗಳನ್ನು ಎಸಗಲಾಗಿದೆಯೆಂದು ನವಾಲ್ನಿಯವರ ಸರಕಾರೇತರ ಚುನಾವಣಾ ಕಣ್ಗಾವಲು ಸಂಸ್ಥೆ ಗೊಲೊ ವರದಿ ಮಾಡಿದೆ.

ಆದರೆ ರಶ್ಯದ ಚುನಾವಣಾ ಆಯೋಗವು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಅಂತಹ ಯಾವುದೇ ಗಂಭೀರ ಉಲ್ಲಂಘನೆಯ ಪ್ರಕರಣಗಳು ವರದಿಯಾಗಿಲ್ಲವೆಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News