ಉಡುಪಿ; ವಿಎಚ್‌ಪಿ ಮುಖಂಡನಿಂದ ಸರಕಾರಿ ನೌಕರನಿಗೆ ಹಲ್ಲೆ : ದೂರು

Update: 2018-03-19 14:43 GMT

ಉಡುಪಿ, ಮಾ.19: ವಿಶ್ವ ಹಿಂದೂ ಪರಿಷತ್ ಉಡುಪಿ ನಗರ ಅಧ್ಯಕ್ಷ ಸಂತೋಷ ಸುವರ್ಣ ಬೊಳ್ಜೆ ಉಡುಪಿ ಸಮಾಜ ಕಲ್ಯಾಣ ಇಲಾಖೆಯಡಿ ಗ್ರೂಪ್ ನೌಕರ ಬೆಳ್ಳಂಪಳ್ಳಿಯ ಅಂಗರ ಸುವರ್ಣ(56) ಎಂಬವರಿಗೆ ಹಲ್ಲೆ ನಡೆಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾ.17ರಂದು ಸಂಜೆ 5:30ರ ಸುಮಾರಿಗೆ ಸಮಾಜ ಕಲ್ಯಾಣ ಇಲಾಖಾ ಕಛೇರಿ ಬಳಿಯ ಉಡುಪಿ ತಾಪಂಗೆ ಸೇರಿದ ಹಳೆ ಕಟ್ಟಡದ ಅರ್ಧ ಭಾಗವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರ ಹಾಗೂ ವಿಎಚ್‌ಪಿ ನಗರ ಅಧ್ಯಕ್ಷ ಉದ್ಯಾವರ ಸಂತೋಷ ಸುವರ್ಣ ಬೊಳ್ಜೆ ನಡೆಸುತ್ತಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಅಂಗರ ಸುವರ್ಣ, ಕಾಮಗಾರಿ ನಡೆಯುತ್ತಿದ್ದ ಹಳೆ ಕಟ್ಟಡದಲ್ಲಿರುವ ಇಲಾಖೆಗೆ ಸೇರಿದ ಹಳೆಯ ಕಡತ ಹಾಗೂ ಇತರ ದಾಖಲೆಗಳ ಸುರಕ್ಷತೆಯ ದೃಷ್ಟಿಯಿಂದ ಸಂತೋಷ್‌ರಲ್ಲಿ ಅರ್ಧ ಕಟ್ಟಿರುವ ಗೋಡೆಯನ್ನು ಸಂಪೂರ್ಣ ಮೇಲಕ್ಕೆರಿಸುವಂತೆ ವಿನಂತಿಕೊಂಡರೆನ್ನಲಾಗಿದೆ.

ಈ ವಿಚಾರದಲ್ಲಿ ಸಂತೋಷ್ ಸುವರ್ಣ ಏಕಾಏಕಿ ಅಲ್ಲೇ ಇದ್ದ ಮರದ ರೀಪಿನಿಂದ ಅಂಗರ ಸುವರ್ಣರ ತಲೆಗೆ ಹೊಡೆಯಲು ಬಂದರು. ಆಗ ಅಂಗರ ಸುವರ್ಣ ಏಟನ್ನು ತಪ್ಪಿಸಿಕೊಳ್ಳಲು ಕಚೇರಿಗೆ ಒಳಗೆ ಹೋದಾಗ ಹಿಂಬಾಲಿಸಿಕೊಂಡು ಬಂದ ಸಂತೋಷ್, ಮರದ ರೀಪಿನಿಂದ ಅಂಗರ ಸುವರ್ಣರ ಎಡ ಕೈಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಅಂಗರ ಸುವರ್ಣ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸಂಜೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಪ್ರಮೋದ್ ಮಧ್ವರಾಜ್ ಗಾಯಾಳು ಅಂಗರ ಸುವರ್ಣರ ಕ್ಷೇಮ ವಿಚಾರಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News