×
Ad

ಆದಿವಾಸಿ ಕುಟುಂಬಗಳ ಮನೆನಿರ್ಮಾಣ ಸಹಾಯಧನ ಹೆಚ್ಚಳ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸ್ವಾಗತ

Update: 2018-03-19 21:08 IST

ಮಂಗಳೂರು, ಮಾ. 19: ಕರ್ನಾಟಕ ರಾಜ್ಯದ ಎರಡು ಮೂಲನಿವಾಸಿಗಳೆಂದು ಪರಿಗಣಿಸಿರುವ ಕೊರಗ ಸಮುದಾಯ ಮತ್ತು ಜೇನುಕುರುಬ ಸಮುದಾಯಗಳ ಫಲಾನುಭವಿಗಳ ಮನೆ ನಿರ್ಮಾಣದ ಘಟಕ ವೆಚ್ಚವನ್ನು 2 ಲಕ್ಷದಿಂದ 4.5 ಲಕ್ಷ ರೂ.ವರೆಗೆ ಹೆಚ್ಚಿಸಲು ದ.ಕ. ಹಾಗೂ ಕೊಡಗು ಮತ್ತಿತರ ಜಿಲ್ಲಾಡಳಿತಗಳು ಸಲ್ಲಿಸಿರುವ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಅಂಗೀಕರಿಸಿರುವುದನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ಸ್ವಾಗತಿಸಿದೆ.

ಸಂಘಟನೆಯು ಕಳೆದ 2017ರ ಜನವರಿಯಲ್ಲಿ ಕೊರಗ ಮತ್ತು ಜೇನುಕುರುಬ ಸಮುದಾಯಗಳ ಮನೆ ನಿರ್ಮಾಣ ಸಹಾಯಧನವನ್ನು ನಾಲ್ಕುವರೆ ಲಕ್ಷ ರೂ.ವರೆಗೆ ಏರಿಸಬೇಕೆಂದು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ನಿರ್ದಿಷ್ಟವಾಗಿ ನಂತೂರು ಹೈಪೊಂಟ್‌ನಲ್ಲಿ ಹೆದ್ದಾರಿ ನಿರ್ಮಾಣದ ಯೋಜನೆಯಲ್ಲಿ ಮನೆಮಠಗಳನ್ನು ಕಳೆದುಕೊಂಡಿರುವ ಎಂಟು ಕೊರಗ ಕುಟುಂಬಗಳ ಪುನರ್ ವಸತಿ ಪ್ರಕ್ರಿಯೆಯ ಭಾಗವಾಗಿ ನೀಡಲಾದ ಮನೆನಿವೇಶನ ಹಕ್ಕುಪತ್ರಕ್ಕೆ ಸಂಬಂಧಿಸಿ ವಿಶೇಷ ಮನವಿಯನ್ನು ಸಲ್ಲಿಸಿ ಸರಕಾರ ರೂ. ಎರಡು ಲಕ್ಷ ಘಟಕ ಯೋಜನೆಯಿಂದ ಮನೆನಿರ್ಮಾಣ ಅಸಾಧ್ಯವೆಂದು ಸಂಘಟನೆಯು ಸರಕಾರದ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಅರ್ಪಿಸಿತ್ತು. ಸಮಾಜ ಕಲ್ಯಾಣ ಮಂತ್ರಿಯವರು ಆದಿವಾಸಿ ಸಮುದಾಯಗಳು ವಾಸಿಸುವ ಹಾಡಿಗಳಲ್ಲಿ ತಂಗಿದ್ದ ಸಂದರ್ಭದಲ್ಲೂ ಸಂಘಟನೆಯು ಮನೆ ನಿರ್ಮಾಣದ ಸಹಾಯಧನವನ್ನು ಹೆಚ್ಚಿಸಲು ಒತ್ತಾಯಿಸಿತ್ತು.

ದ.ಕ. ಜಿಲ್ಲಾ ಪಂಚಾಯತ್‌ನ ಮುಖ್ಯ ಸಿಇಓ ಡಾ.ಎಂ. ಆರ್. ರವಿ, ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮತ್ತು ಐಟಿಡಿಪಿ ಸಮನ್ವಯ ಅಧಿಕಾರಿಗಳ ಜಂಟಿ ಪ್ರಯತ್ನದಿಂದ ಅನುದಾನದ ಹೆಚ್ಚಳವಾಗಿರುವುದನ್ನು ಸಂಘಟನೆಯು ಸ್ವಾಗತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News