ಕಳವುಗೈದ ಕಾರನ್ನು 12ಗಂಟೆಯೊಳಗೆ ಆರೋಪಿ ಸಹಿತ ವಶಪಡಿಸಿಕೊಂಡ ಉಡುಪಿ ಪೊಲೀಸರು

Update: 2018-03-19 16:02 GMT

ಉಡುಪಿ, ಮಾ.19: ಕಳವುಗೈದ ಕಾರನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ಪೊಲೀಸರು ಕೇವಲ 12ಗಂಟೆಯೊಳಗೆ ಆರೋಪಿ ಸಹಿತ ವಶಪಡಿಸಿ ಕೊಂಡ ಘಟನೆ ನಡೆದಿದೆ.

ಕಾಸರಗೋಡು ಜಿಲ್ಲೆಯ ಪಯ್ಯಳಿಕೆ ಗ್ರಾಮದ, ಪ್ರಸ್ತುತ ಇಂದ್ರಾಳಿ ಜಯದುರ್ಗ ಲಾಡ್ಜ್‌ನಲ್ಲಿ ವಾಸವಾಗಿರುವ ಅಭಿಜಿತ್ ಯಾನೆ ಜಿತ್ತು(25) ಬಂಧಿತ ಆರೋಪಿ. ಈತನಿಂದ ಕಳವುಗೈದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯ ಜಯದುರ್ಗ ಕಾಂಪ್ಲೆಕ್ಸ್‌ನಲ್ಲಿರುವ ಪ್ರಸಾದ್ ಎಂಬವರ ಎಸ್‌ವಿಎಸ್ ಟೂರ್ಸ್‌ ಆ್ಯಂಡ್ ಟ್ರಾವೆಲ್ಸ್‌ನ ಎದುರು ಮಾ.17ರಂದು ರಾತ್ರಿ ನಿಲ್ಲಿಸಿದ್ದ 5ಲಕ್ಷ ರೂ. ಮೌಲ್ಯದ ಕೆಎ-20-ಡಿ-9770 ನಂಬರಿನ ಸ್ವಿಪ್ಟ್ ಡಿಸೈರ್ ಟೂರಿಸ್ಟ್ ಕಾರು ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ಕಾರ್ಯಾಚರಣೆ ನಡೆಸಿದ ಉಡುಪಿ ವೃತ್ತ ನಿರೀಕ್ಷಕ ಮಂಜು ನಾಥ್ ನೇತೃತ್ವದ ತಂಡ ಆರೋಪಿ ಅಭಿಜಿತ್‌ನನ್ನು ಮಾ.18ರ ಮಧ್ಯಾಹ್ನ ವೇಳೆ ಶಿವಮೊಗ್ಗದಲ್ಲಿ ವಶಕ್ಕೆ ತೆಗೆದುಕೊಂಡಿತು. ಆರೋಪಿಯನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾ.31ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಹಾಗೂ ಡಿವೈಎಸ್ಪಿ ಜೈಶಂಕರ್ ಟಿ.ಆರ್. ಮಾರ್ಗದರ್ಶನದಲ್ಲಿ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ಸುಧೇಶ್ ಶೆಟ್ಟಿ, ಉಮೇಶ್, ಇಮ್ರಾನ್, ರುದ್ರವ್ವ ಈ ಕಾರ್ಯಾಚರಣೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News