ಜಾಮೀನು ಬಿಡುಗಡೆಗೆ ಬಾಂಗ್ಲಾ ಸುಪ್ರೀಂಕೋರ್ಟ್ ನಕಾರ: ಖಲೀದಾಗೆ ಜೈಲೇ ಗತಿ

Update: 2018-03-19 17:10 GMT

ಢಾಕಾ,ಮಾ.19: ಬಾಂಗ್ಲಾದ ಪ್ರತಿಪಕ್ಷ ನಾಯಕಿ ಖಲೀದಾ ಝಿಯಾ ಅವರ ಜಾಮೀನು ಬಿಡುಗಡೆಗೆ ಸುಪ್ರೀಂಕೋರ್ಟ್ ಸೋಮವಾರ ತಡೆಯೊಡ್ಡಿದೆ. ಡಿಸೆಂಬರ್‌ನಲ್ಲಿ ಬಾಂಗ್ಲಾ ಚುನಾವಣೆಯನ್ನು ಎದುರಿಸಲಿರುವಂತೆಯೇ,ಸರ್ವೋಚ್ಚ ನ್ಯಾಯಾಲಯದ ನಿರ್ಧಾರವು ಭಾರೀ ದೊಡ್ಡ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆಗಳು ನಿಚ್ಚಳವಾಗಿ ಗೋಚರವಾಗುತ್ತಿವೆ.

ತನ್ನ ಪತಿಯ ಹೆಸರಿನಲ್ಲಿ ತಾನು ನಡೆಸುತ್ತಿದ್ದ ಅನಾಥಾಶ್ರಮವೊಂದಕ್ಕೆ ನೀಡಲಾಗಿದ್ದ ಹಣವನ್ನು ದುರ್ಬಳಕೆ ಮಾಡಿದ ಆರೋಪದಲ್ಲಿ 72 ವರ್ಷದ ಖಲೀದಾ ಝಿಯಾ ಅವರಿಗೆ ಕಳೆದ ತಿಂಗಳು ಬಾಂಗ್ಲಾದ ಕೆಳ ನ್ಯಾಯಾಲಯವೊಂದು ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

 ಖಲೀದಾರಿಗೆ ಜಾಮೀನು ಬಿಡುಗಡೆ ನೀಡುವ ಕೆಳ ನ್ಯಾಯಾಲಯದ ನಿರ್ಧಾರವನ್ನು ಸುಪ್ರೀಂಕೋರ್ಟ್‌ನ ನ್ಯಾಯಪೀಠವು ಮೇ ತಿಂಗಳವರೆಗೆ ಅಮಾನತಿನಲ್ಲಿಡಲು ನಿರ್ಧರಿಸಿದೆ. ಸರ್ವೋಚ್ಚ ನ್ಯಾಯಾಲಯದ ನಿರ್ಧಾರಕ್ಕೆ ಖಲೀದಾ ಅವರ ನ್ಯಾಯವಾದಿಗಳಿಂದ ತೀಕ್ಷ್ಣವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿಪಕ್ಷವನ್ನು ಮೌನವಾಗಿಸಲು ಶೇಖ್ ಹಸೀನಾ ನಡೆಸುತ್ತಿರುವ ಅಭಿಯಾನದ ಭಾಗ ಇದಾಗಿದೆಯೆಂದು ಅವರು ಆಪಾದಿಸಿದ್ದಾರೆ.

   ‘‘ಖಲೀದಾ ಝಿಯಾಗೆ ಜಾಮೀನು ನೀಡದಿರುವ ನಿರ್ಧಾರವು ಬಾಂಗ್ಲಾದೇಶದ ನ್ಯಾಯಾಂಗದ ಇತಿಹಾಸದಲ್ಲೇ ಅಭೂತಪೂರ್ವವಾದುದು. ಚುನಾವಣೆಯ ಸಂದರ್ಭದಲ್ಲಿ ಖಲೀದಾ ಬಂಧನದಲ್ಲಿರಬೇಕೆಂಬ ಬಾಂಗ್ಲಾ ಸರಕಾರದ ಆಶಯದ ಪ್ರತಿಬಿಂಬ ಇದಾಗಿದೆಯೆಂದು ಖಲೀದಾ ನೇತೃತ್ವದ ಬಾಂಗ್ಲಾದೇಶ್ ನ್ಯಾಶನಲಿಸ್ಟ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಫಖ್ರುಲ್ ಇಸ್ಲಾಮ್ ಆಲಂಗಿರ್ ಆಪಾದಿಸಿದ್ದಾರೆ. 1980ರ ದಶಕದಲ್ಲಿ ವಿಫಲ ಸೇನಾಕ್ರಾಂತಿಯ ಸಂದರ್ಭದಲ್ಲಿ ಖಲೀದಾ ಜಿಯಾರ ಸೇನಾಧಿಕಾರಿ ಪತಿ ಹತ್ಯೆಯಾಗಿದ್ದರು. ಆ ಬಳಿಕ ಖಲೀದಾ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದರು. ಮೂರು ಬಾರಿ ಪ್ರಧಾನಿಯಾಗಿ ಅವರು ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅನಾಥಾಶ್ರಮದ ಹಣ ದುರುಪಯೋಗ ಪ್ರಕರಣದ ಜೊತೆ ಹಿಂಸಾಚರಕ್ಕೆ ಪ್ರಚೋದನೆ ನೀಡಿದ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಕೂಡಾ ಖಲೀದಾ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News