ಪುತ್ತೂರು; ಕೆಸರುಮಯವಾದ ವಾರದ ಸಂತೆ: ಪರದಾಡಿದ ವ್ಯಾಪಾರಸ್ಥರು
ಪುತ್ತೂರು,ಮಾ.19 : ಪುತ್ತೂರು ನಗರದಲ್ಲಿ ಸೋಮವಾರ ಸಂಜೆ ಗಾಳಿ, ಗಡುಗು ಸಹಿತ ಬಾರೀ ಮಳೆ ಸುರಿದಿದ್ದು, ಇಲ್ಲಿನ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ವಾರದ ಸಂತೆ ಜಾಗದಲ್ಲಿ ಮಳೆನೀರು ತುಂಬಿ ಸಂತೆ ಮೈದಾನ ಕೆಸರುಮಯ ಕೊಳವಾಗಿ ಮಾರ್ಪಟ್ಟಿದ್ದು, ಸಂತೆ ತರಕಾರಿಗಳು ನೀರಿನಲ್ಲಿ ತೇಲಿ ಹೋಗಿವೆ.
ಪುತ್ತೂರು ನಗರದಲ್ಲಿ ಸೋಮವಾರ ಸಂಜೆ 3.30ರ ವೇಳೆಗೆ ಬಾರೀ ಗುಡುಗು -ಮಿಂಚಿನೊಂದಿಗೆ ಸರಿಯಲಾರಂಭಿಸಿದ ಮಳೆ ಮಕ್ಕಾಲು ಗಂಟೆಗಳ ಕಾಲ ನಿರಂತರವಾಗಿ ಸುರಿದಿದೆ. ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ತುಂತುರು ಮಳೆ ಮುಂದುವರಿದಿದೆ.
ವಾರದ ಸಂತೆ ನಡೆಯುವ ಕಿಲ್ಲೆ ಮೈದಾನಕ್ಕೆ ಮಳೆ ನೀರು ನುಗ್ಗಿ ಮೈದಾನದ ಮಧ್ಯೆ ತುಂಬಿಕೊಂಡಿದೆ. ಮೈದಾನದಲ್ಲಿ ಸಂತೆ ವ್ಯಾಪಾರ ನಡೆಸುತ್ತಿದ್ದ ನೂರಾರು ವರ್ತಕರು ತರಕಾರಿ ಮತ್ತು ಇತರ ಸಂತೆ ಸಾಮಾಗ್ರಿಗಳನ್ನು ರಕ್ಷಿಸಿಕೊಳ್ಳಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಯಿತು. ಸಂತೆ ಮೈದಾನ ಸಂಪೂರ್ಣ ಕೆಸರುಮಯವಾಗಿದ್ದು, ಮಧ್ಯೆ ನೀರುತುಂಬಿಕೊಂಡು ಕೊಳವಾಗಿ ಮಾರ್ಪಟ್ಟಿದೆ. ಮಳೆಯಿಮದಾಗಿ ಸಂತೆ ವ್ಯಾಪಾರವೂ ಕಡಿಮೆಯಾಗುವಂತಾಗಿದೆ.
ಬಾರೀ ಗಾಳಿ,ಗುಡುಗಿನೊಂದಿಗೆ ಮಳೆ ಆರಂಭವಾದ ಬೆನ್ನಲ್ಲೇ ವಿದ್ಯುತ್ ವ್ಯವಸ್ಥೆ ಸ್ಥಗಿತಗೊಂಡಿತ್ತು. ಪುತ್ತೂರು ತಾಲೂಕಿನಲ್ಲಿ 30 ವಿದ್ಯುತ್ ಕಂಬಗಳು ಗಾಳಿ ಮಳೆಗೆ ಉರುಳಿ ಬಿದ್ದಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.