ಬಂಟ್ವಾಳ : ವಿದ್ಯಾರ್ಥಿನಿಯರೊಂದಿಗೆ ವಿಹಾರಕ್ಕೆಂದು ತೆರಳಿದ್ದ ಯುವಕರಿಬ್ಬರಿಗೆ ಸಂಘಪರಿವಾರದ ಕಾರ್ಯಕರ್ತರಿಂದ ಥಳಿತ
ಬಂಟ್ವಾಳ, ಮಾ.19: ವಿದ್ಯಾರ್ಥಿನಿಯರೊಂದಿಗೆ ವಿಹಾರಕ್ಕೆಂದು ತೆರಳಿದ್ದ ಇನ್ನೊಂದು ಧರ್ಮದ ಯುವಕರಿಬ್ಬರನ್ನು ಇಲ್ಲಿನ ಸಂಘಪರಿವಾರದ ಕಾರ್ಯಕರ್ತರು ತಡೆದು, ಥಳಿಸಿ ವಿದ್ಯಾರ್ಥಿನಿಯರ ಸಹಿತ ಪುಂಜಾಲಕಟ್ಟೆ ಪೊಲೀಸರಿಗೊಪ್ಪಿಸಿದ ಘಟನೆ ಸೋಮವಾರ ಸಂಭವಿಸಿದೆ.
ರಿಕ್ಷಾ ಚಾಲಕರಾದ ಎನ್.ಸಿ.ರೋಡ್‍ನ ಇರ್ಫಾನ್ ಮತ್ತು ಇರ್ವತ್ತೂರ್‍ನ ನಝೀಮ್ ಹಲ್ಲೆಗೊಳಗಾದ ಯುವಕರು ಎಂದು ತಿಳಿದುಬಂದಿದೆ.
ಸ್ಥಳೀಯ ಕಾಲೇಜೊಂದರ ಐವರು ವಿದ್ಯಾರ್ಥಿನಿಯರು ಪ್ರತಿದಿನ ಇರ್ಫಾನ್ ಎಂಬವರ ರಿಕ್ಷಾದಲ್ಲಿ ಮಡಂತ್ಯಾರಿಗೆ ಸಂಜೆ ಟ್ಯೂಷನ್‍ಗೆ ತೆರಳುತ್ತಿದ್ದರು. ಎಂದಿನಂತೆ ಸೋಮವಾರವೂ ಹೋಗಿದ್ದರು. ಟ್ಯೂಷನ್ ಬಳಿಕ ವಿದ್ಯಾರ್ಥಿನಿಯರು ಅದೇ ರಿಕ್ಷಾದಲ್ಲಿ ಇನ್ನೊಬ್ಬ ಯುವಕ ನಝೀಮ್ ಎಂಬಾತನ ಜೊತೆ ಸೇರಿ ಇಲ್ಲಿನ ಕಾರಿಂಜ ಬೆಟ್ಟಕ್ಕೆ ವಿಹಾರಕ್ಕೆಂದು ತೆರಳಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಈ ಯುವಕರಿಬ್ಬರೊಂದಿಗೆ ಸೆಲ್ಫಿ ತೆಗೆಯುತ್ತಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯ ಸಂಘಪರಿವಾರದ ಕಾರ್ಯಕರ್ತರು ಪ್ರಶ್ನಿಸಿ, ತದನಂತರ ಯುವಕರಿಬ್ಬರಿಗೆ ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಪುಂಜಾಲಕಟ್ಟೆ ಠಾಣಾಧಿಕಾರಿ ಸುದರ್ಶನ್ ಹಾಗೂ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರ ಹೆತ್ತವರನ್ನು ಕರೆಸಿ, ಬುದ್ಧಿ ಮಾತು ಹೇಳಿ ಕಳುಹಿಸಲಾಗಿದೆ. ರಿಕ್ಷಾ ಚಾಲಕರನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಸುದ್ದಿ ತಿಳಿಯತ್ತಿದ್ದಂತೆ ಪುಂಜಾಲಕಟ್ಟೆ ಠಾಣೆಗೆ ಜನ ಜಮಾಯಿಸತೊಡಗಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.