ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ರಾಜಗೋಪುರ
ಪುತ್ತೂರು,ಮಾ.19: ಎಂಟುನೂರು ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ ಇತಿಹಾಸಲ್ಲೇ ಮೊದಲ ಬಾರಿಗೆ ರೂ.1.25 ಕೋಟಿ ವೆಚ್ಚದಲ್ಲಿ ಭವ್ಯ ರಾಜಗೋಪುರ ನಿರ್ಮಾಣ ಮಾಡಲಾಗಿದ್ದು, ಮಾ.25ರಂದು ರಾಜಗೋಪುರದ ಉದ್ಘಾಟನಾ ಕಾರ್ಯಕ್ರಮ ವಿವಿಧ ಧಾರ್ಮಿಕ, ವೈದಿಕ ಮತ್ತು ಸಾಂಸ್ಕೃತಿಕ ವೈವಿಧ್ಯಗಳೊಂದಿಗೆ ನಡೆಯಲಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ ತಿಳಿಸಿದ್ದಾರೆ.
ದೇವಾಲಯದಲ್ಲಿ ಸೋಮವಾರ ರಾಜಗೋಪುರದ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ರಾಜಗೋಪುರಕ್ಕೆ ಖರ್ಚು ಮಾಡಿದ ಹಣದಲ್ಲಿ ಮುಕ್ಕಾಲಾಂಶ ಭಕ್ತರು ನೀಡಿದ ದೇಣಿಗೆಯಾಗಿದೆ. ಕೇವಲ ಹತ್ತು ತಿಂಗಳ ಅವಧಿಯಲ್ಲಿ ಗೋಪುರ ನಿರ್ಮಾಣ ಕಾರ್ಯ ಮುಗಿದಿದೆ. ತಮಿಳುನಾಡಿನ ಖ್ಯಾತ ಸ್ತಪತಿ ಶೇಖರ್ ಅವರ ವಾಸ್ತು ವಿನ್ಯಾಸ ಮಾರ್ಗದರ್ಶನದಂತೆ ನಿರ್ಮಾಣ ಕಾರ್ಯ ನಡೆದಿದೆ ಎಂದರು.
ಇಟ್ಟಿಗೆ, ಮರಳು ಮತ್ತು ಸಿಮೆಂಟ್ ಬಳಸಿ ನಿರ್ಮಾಣ ಮಾಡಲಾಗಿರುವ ರಾಜಗೋಪುರ 47.5 ಅಡಿ ಎತ್ತರ ಮತ್ತು 19 ಅಡಿ ಸುತ್ತಳತೆ ಹೊಂದಿದೆ. ದೇವಾಲಯದ ಧ್ವಜಸ್ಥಂಭ (ಕೊಡಿಮರ) 55 ಅಡಿ ಇದ್ದು, ಅದಕ್ಕಿಂತ ಸ್ವಲ್ಪ ಕಿರಿದಾಗಿ ರಾಜಗೋಪುರ ನಿರ್ಮಿಸಲಾಗಿದೆ. ಗೋಪುರದ ಸುತ್ತ 120 ದೇವತಾ ಮೂರ್ತಿಗಳನ್ನು ಕೆತ್ತಲಾಗಿದೆ. ಗೋಪುರದ ಶಿಖರದಲ್ಲಿ ಪಂಚ ಕಲಶಗಳನ್ನು ಸ್ಥಾಪಿಸಲಾಗುತ್ತದೆ. ಗೋಪುರದ ಎರಡೂ ಪಾಶ್ರ್ವಗಳಲ್ಲಿ ತಲಾ 57.5 ಅಡಿ ಉದ್ದ ಮತ್ತು 18 ಅಡಿ ಅಗಲದ ಸೋಬಾನೆ ಮಂಟಪ ರಚಿಸಲಾಗಿದ್ದು, 32 ಆಕರ್ಷಕ ಕಂಬಗಳನ್ನು ಒಳಗೊಂಡಿದೆ. ಸೋಬಾನೆ ಮಂಪಟದ ಇಕ್ಕೆಲಗಳಲ್ಲಿ 36 ಅಡಿ ಎತ್ತರ ಮತ್ತು 18 ಅಡಿ ಅಗಲದ ಎರಡು ಕಮಾನು ದ್ವಾರಗಳನ್ನು ನಿರ್ಮಿಸಲಾಗಿದೆ. ಇವುಗಳ ಪಕ್ಕದಲ್ಲಿ 10 ಅಡಿ ಉದ್ದ ಮತ್ತು 7 ಅಡಿ ಅಗಲದ ಎರಡೂ ಕಿರು ಮಂಟಪಗಳನ್ನು ನಿರ್ಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ದೇವಾಲಯದ ತಂತ್ರಿ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಮಾ.24ರಂದು ಸಂಜೆಯಿಂದ ಆರಂಭಗೊಂಡು ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 6 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮವಿದೆ. 25ರಂದು ಭಾನುವಾರ ಬೆಳಿಗ್ಗೆ 7ರಿಂದ ಗಣಪತಿ ಹವನ, ಸಹಸ್ರ ಕಲಶಾಭಿಷೇಕ ನಡೆಯುವುದು. ಪೂರ್ವಾಹ್ನ 11.28ರ ಮಿಥುನ ಲಗ್ನ ಸುಮೂಹೂರ್ತದಲ್ಲಿ ನೂತನ ರಾಜಗೋಪುರದ ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ರಾಜಗೋಪುರ ಸಮರ್ಪಣೆ, ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮ ನಡೆಯುವುದು ಎಂದು ಸುಧಾಕರ ಶೆಟ್ಟಿ ಅವರು ತಿಳಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ರಾಜಗೋಪುರ ಲೋಕಾರ್ಪಣೆ ಮಾಡುವರು. ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡುವರು. ಶಾಸಕಿ ಶಕುಂತಳಾ ಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವಿನಯ ಕುಮಾರ್ ಸೊರಕೆ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.
26ರಂದು ಮುಂಜಾನೆ 6ರಿಂದ ರುದ್ರ ಪಾರಾಯಣ, 9ರಿಂದ ಶತರುದ್ರಾಭಿಷೇಕ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ. ರಾತ್ರಿ ದೇವರ ಬಲಿ ಉತ್ಸವ, ಬಂಡಿ ಉತ್ಸವ ನಡೆಯುವುದು. ದೇವರಿಗೆ 1200 ಕಲಶಾಭಿಷೇಕ ಮಾಡಲಿದ್ದು,ಕಲಶಾಭಿಷೇಕದಲ್ಲಿ ಭಕ್ತರ ಪಾಲುದಾರಿಕೆ ಇರಬೇಕಾದ ಕಾರಣಕ್ಕಾಗಿ ಕಲಶವೊಂದಕ್ಕೆ ರೂ 1 ಸಾವಿರ ನಿಗದಿಪಡಿಸಲಾಗಿದೆ. ಭಕ್ತರು ಈ ಸೇವೆಯ ಮೂಲಕ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕರುಣಾಕರ ರೈ, ಯು.ಪಿ. ರಾಮಕೃಷ್ಣ, ಜಾನು ನಾಯ್ಕ, ರೋಹಿಣಿ ಆಚಾರ್ಯ ಅವರು ಹಾಜರಿದ್ದರು.