×
Ad

​ಮೀನುಗಾರ ಮುಖಂಡರಿಂದ ರಾಹುಲ್ ಗಾಂಧಿ ಜೊತೆ ಚರ್ಚೆ

Update: 2018-03-20 19:49 IST

ಪಡುಬಿದ್ರೆ, ಮಾ.20: ಸಿಆರ್‌ಝೆಡ್ ಸಮಸ್ಯೆ, ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸ್ಥಳೀಯ ಮೀನುಗಾರ ಮುಖಂಡರು ಇಂದು ತೆಂಕ ಎರ್ಮಾಳಿಗೆ ಆಗಮಿಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಚರ್ಚಿಸಿದರು.

ತೆಂಕ ಎರ್ಮಾಳಿನಲ್ಲಿರುವ ರಾಜೀವ ಗಾಂಧಿ ಪೊಲಿಟಿಕಲ್ ಇನ್‌ಸ್ಟಿಟ್ಯೂಟ್ ಉದ್ಘಾಟನೆಗೆ ಮೊದಲು ಅಲ್ಲೇ ಸಮೀಪದಲ್ಲಿರುವ ತೆಂಕ ಎರ್ಮಾಳ್ ಗ್ರಾಪಂ ಉಪಾಧ್ಯಕ್ಷ ಹಾಗೂ ಸೇವಾದಳ ಕಾಪು ಬ್ಲಾಕ್ ಅಧ್ಯಕ್ಷ ಕಿಶೋರ್ ಕುಮಾರ್ ಅವರ ಮನೆಗೆ ತೆರಳಿದ ರಾಹುಲ್ ಗಾಂಧಿ ಮನೆಯ ಹೊರಗಡೆ ಜಗಲಿಯಲ್ಲೇ ಕುಳಿತು ಮೀನುಗಾರ ಮುಖಂಡರೊಂದಿಗೆ ಮಾತುಕತೆ ನಡೆಸಿದರು.

ರಾಹುಲ್ ಗಾಂಧಿ ಜೊತೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಚಿವರಾದ ಡಿ.ಕೆ.ಶಿವಕುಮಾರ್, ಪ್ರಮೋದ್ ಮಧ್ವರಾಜ್, ಶಾಸಕ ವಿನಯಕುವಾರ್ ಸೊರಕೆ ಕೂಡ ಹಾಜರಿದ್ದರು.

ಸಭೆಯಲ್ಲಿ ಸ್ಥಳೀಯ ಸುಮಾರು 60-70 ಮೀನುಗಾರರ ಮುಖಂಡರು ಪಾಲ್ಗೊಂಡು ತಮ್ಮ ಅಹವಾಲುಗಳನ್ನು ರಾಹುಲ್ ಗಾಂಧಿ ಮುಂದಿಟ್ಟರು.
ಸಿಆರ್‌ಝೆಡ್ ಸಮಸ್ಯೆಯನ್ನು ಬಗೆಹರಿಸಬೇಕು, ಮೊಗವೀರ ಸಮುದಾಯ ವನ್ನು ಎಸ್‌ಟಿ ಗುಂಪಿಗೆ ಸೇರಿಸಬೇಕು, ಮೀನುಗಾರರ ಮಕ್ಕಳ ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಹಾಗೂ ರೈತರ ಸಾಲಮನ್ನಾದಂತೆ ಮೀನುಗಾರರ ಸಾಲವನ್ನು ಕೂಡ ಮನ್ನಾ ಮಾಡಬೇಕೆಂದು ಮೀನುಗಾರ ಮುಖಂಡರು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ರಾಹುಲ್ ಗಾಂಧಿ, ಮೊಗವೀರ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಹಾಗೂ ಸಿಆರ್‌ಝೆಡ್ ಸಮಸ್ಯೆ ಕೇಂದ್ರ ಸರಕಾರಕ್ಕೆ ಸಂಬಂಧಪಟ್ಟದ್ದಾಗಿದ್ದು, ಈ ಬಗ್ಗೆ ಪ್ರಯತ್ನ ಮಾಡುತ್ತೇನೆ. ಮೀನುಗಾರರ ಸಾಲ ಮನ್ನಾ ಹಾಗೂ ಮೀನುಗಾರರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಬಗ್ಗೆ ರಾಜ್ಯ ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಮೀನುಗಾರ ಮುಖಂಡರಾದ ದಾಮೋದರ್ ಸುವರ್ಣ, ಲಿಂಗಪ್ಪ ಪುತ್ರನ್, ಪದ್ಮನಾಭ ಸುವರ್ಣ, ರಘುರಾಮ ಸುವರ್ಣ, ಗುಣವತಿ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News