ರಾಹುಲ್ ಗಾಂಧಿ ಪಡುಬಿದ್ರೆ ರೋಡ್ ಶೋ ರದ್ದು

Update: 2018-03-20 15:13 GMT

ಪಡುಬಿದ್ರಿ, ಮಾ.20: ಜನಾಶೀರ್ವಾದ ಯಾತ್ರೆ ಅಂಗವಾಗಿ ಮಂಗಳವಾರ ಎರ್ಮಾಳಿನಿಂದ ಪಡುಬಿದ್ರೆಯವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ರೋಡ್ ಶೋವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಯಿತು.
ರಾಹುಲ್ ಗಾಂಧಿ ತೆಂಕ ಎರ್ಮಾಳಿನ ರಾಜೀವ ಗಾಂಧಿ ಪೊಲಿಟಿಕಲ್ ಇನ್‌ಸ್ಟಿಟ್ಯೂಟ್ ಉದ್ಘಾಟಿಸಿದ ಬಳಿಕ ಅಲ್ಲಿಂದ ಪಡುಬಿದ್ರೆಯ ರಾಷ್ಟ್ರೀಯ ಹೆದ್ದಾರಿ ಬಳಿ ನಡೆಯುವ ಕಾರ್ನರ್ ಮಿಟಿಂಗ್‌ವರೆಗೆ ರೋಡ್‌ಶೋ ನಡೆಸುವ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು. ಆದರೆ ಮಧ್ಯಾಹ್ನದ ಬಿರುಬಿಸಿಲಿನ ಕಾರಣ ಇಡೀ ರೋಡ್‌ಶೋವನ್ನು ರದ್ದುಪಡಿಸಲಾಯಿತು. ಈ ಹಿನ್ನೆಲೆಯಲ್ಲಿ ಬಸ್ಸಿನಲ್ಲಿ ಬರಬೇಕಾಗಿದ್ದ ರಾಹುಲ್ ಗಾಂಧಿ ಬೆಂಗಾಲು ಪಡೆಯ ಭದ್ರತೆಯಲ್ಲಿ ಕಾರಿನಲ್ಲೇ ನೇರವಾಗಿ ಕಾರ್ನರ್ ಮಿಟಿಂಗ್ ತಾಣಕ್ಕೆ ಆಗಮಿಸಿದರು.

ಕಾರ್ನರ್ ಮೀಟಿಂಗ್, ಕಾಮಗಾರಿ ನಡೆಯುತ್ತಿರುವ ಪಡುಬಿದ್ರೆ ಪೇಟೆಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಆಯೋಜಿಸಿರುವುದರಿಂದ ವಾಹನ ಸಂಚಾರ ದಲ್ಲಿ ತೀರಾ ವ್ಯತ್ಯಯ ಉಂಟಾಯಿತು. ಮಧ್ಯಾಹ್ನ 3ಗಂಟೆಯವರೆಗೆ ರಾಷ್ಟ್ರೀಯ ಹೆದ್ದಾರಿ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು. ಇಡೀ ಕಾರ್ಯಕ್ರಮಕ್ಕೆ ಉಡುಪಿ ಎಸ್ಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವೇದಿಕೆ ಬಗ್ಗೆ ಅಸಮಾಧಾನ:ಕಾರ್ನರ್ ಮಿಟಿಂಗ್‌ಗೆ ಆಗಮಿಸಿದ ರಾಹುಲ್ ಗಾಂಧಿ ವೇದಿಕೆ ಏರುತ್ತಿದ್ದಂತೆ ವೇದಿಕೆಗಿಂತ ಸುಮಾರು 50 ಮೀಟರ್ ಅಂತರದಲ್ಲಿ ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಜೊತೆ ವೇದಿಕೆಯಲ್ಲಿ ನಿಂತು ರಾಹುಲ್ ಗಾಂಧಿ ವೇದಿಕೆಯನ್ನು ಇನ್ನಷ್ಟು ಹತ್ತಿರ ಮಾಡುತ್ತಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆನ್ನಲಾಗಿದೆ.

ಕಾರ್ಯಕ್ರಮ ಮುಗಿದ ಬಳಿಕ ರಾಹುಲ್ ಗಾಂಧಿ ಇತರ ಮುಖಂಡರ ಜೊತೆ ವಿಶೇಷ ಬಸ್‌ನಲ್ಲಿ ಸಂಚರಿಸಿದರು. ಬಸ್ ಏರುವ ಮೊದಲು ರಾಹುಲ್ ಗಾಂಧಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಬಳಿ ಬಂದು ಹಸ್ತಲಾಘವ ಮಾಡಿದರು. 

ನಾರಾಯಣಗುರು ಮಂದಿರ ಭೇಟಿ
ಜನಾಶೀರ್ವಾದ ಯಾತ್ರೆ ಅಂಗವಾಗಿ ಮಂಗಳವಾರ ಪಡುಬಿದ್ರೆಗೆ ಆಗಮಿಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಹೆಜಮಾಡಿಯ ನಾರಾಯಣಗುರು ಮಂದಿರಕ್ಕೆ ಭೇಟಿ ನೀಡಿದ ವಿಶೇಷ ಪೂಜೆ ಸಲ್ಲಿಸಿದರು.
ಮಧ್ಯಾಹ್ನ ಹೆಜಮಾಡಿಯ ಬಿಲ್ಲವರ ಸಂಘದಲ್ಲಿ ರಾಹುಲ್‌ಗಾಂಧಿ ಹಾಗೂ ಪಕ್ಷದ ಮುಖಂಡರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ರಾಹುಲ್‌ಗಾಂಧಿ ರೊಟ್ಟಿ, ಉಪ್ಪಿನಕಾಯಿ, ಸಲಾಡ್, ನೀರ್‌ದೋಸೆ, ತರಕಾರಿ ಕುರ್ಮ, ಚಿಕನ್ ಕುರ್ಮ, ಮಾಂಜಿ ಕರಿ, ಕಾಣೆ ಫ್ರೈ, ಊಟ, ಸಾಂಬಾರ್, ವೆಜ್ ಕಿಚಡಿ ಸಹಿತ ಹಲವು ಬಗೆಯ ಖಾದ್ಯಗಳನ್ನು ಸವಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News