ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಜು.2ರಿಂದ ವಿಚಾರಣೆ ಆರಂಭ

Update: 2018-03-20 15:58 GMT

ಉಡುಪಿ, ಮಾ.20: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಸಾಕ್ಷಿಗಳ ವಿಚಾರಣೆಯು ಜು.2ರಿಂದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರಂಭಗೊಳ್ಳಲಿದೆ.

ಪ್ರಕರಣದ ವಿಚಾರಣೆ ಆರಂಭಕ್ಕೆ ಇಂದು ದಿನ ನಿಗದಿ ಪಡಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ, ಜು.2, 3, 4, 5 ಮತ್ತು 6ರಂದು ಒಟ್ಟು 167 ಸಾಕ್ಷದಾರರು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ ಹೇಳುವಂತೆ ಸಮ್ಸ್ ಜಾರಿ ಮಾಡಲು ಆದೇಶ ನೀಡಿದರು.

ಇಂದಿನ ವಿಚಾರಣೆಯನ್ನು ಆರೋಪಿಗಳು ಇರುವ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಸಲಾಯಿತು. ಈ ಸಂದರ್ಭದಲ್ಲಿ ವಿಶೇಷ ಅಭಿಯೋಜಕ ಶಾಂತಾರಾಮ್ ಶೆಟ್ಟಿ, ಆರೋಪಿಗಳ ಪರ ವಕೀಲ ಅರುಣ್ ಬಂಗೇರ ಹಾಜರಿದ್ದರು.

ಮಾ.28ಕ್ಕೆ ಮುಂದೂಡಿಕೆ:ಪ್ರಕರಣದ ಆರೋಪಿ ನಂದಳಿಕೆ ನಿರಂಜನ್ ಭಟ್‌ಗೆ ಜಾಮೀನು ನೀಡುವಂತೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದಲ್ಲಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಮಾ.28ಕ್ಕೆ ಮುಂದೂಡಲಾಯಿತು.

ಮಾ.12ರಂದು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಅಭಿಯೋಜಕ ಶಾಂತಾರಾಮ್ ಶೆಟ್ಟಿ ಅವಕಾಶ ಕೇಳಿದ ಹಿನ್ನೆಲೆಯಲ್ಲಿ ಮಾ.20ಕ್ಕೆ ಮುಂದೂಡ ಲಾಗಿತ್ತು. ಆದರೆ ಶಾಂತಾರಾಮ್ ಶೆಟ್ಟಿಯನ್ನು ವಿಶೇಷ ಅಭಿಯೋಜಕರನ್ನಾಗಿ ಮುಂದುವರೆಸಿದ ಸರಕಾರ ಆದೇಶದ ಪ್ರತಿಯನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಿರುವುದರಿಂದ ಆಕ್ಷೇಪಣೆಗೆ ಮತ್ತೆ ಅವಕಾಶ ಕೇಳಲಾಯಿತು. ಹೀಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ವಿಚಾರಣೆಯನ್ನು ಮಾ.28ಕ್ಕೆ ಮುಂದೂಡಿ ನ್ಯಾಯಾಧೀಶ ವೆಂಕಟೇಶ್ ನಾಯ್ಕ ಆದೇಶ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News