ಮಹಿಳೆಯ ಕೊಲೆ: ಆರೋಪಿಯ ಅಪರಾಧ ಸಾಬೀತು

Update: 2018-03-20 16:05 GMT

ಕುಂದಾಪುರ, ಮಾ.20: ಮೂರು ವರ್ಷಗಳ ಹಿಂದೆ ಕುಂದಾಪುರ ವಸತಿ ಗೃಹವೊಂದರಲ್ಲಿ ನಡೆದ ಮಹಿಳೆಯ ಕೊಲೆಗೈದು ಚಿನ್ನಾಭರಣ ಸುಲಿಗೆ ಮಾಡಿರುವ ಪ್ರಕರಣದ ಆರೋಪಿ ಮುಂಬೈ ಮೂಲದ ಅಫ್ಜಲ್ ಖಾನ್(42) ಎಂಬಾತನನ್ನು ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿ ಎಂಬುದಾಗಿ ಇಂದು ತೀರ್ಪು ನೀಡಿದ್ದು, ಮಾ.26ರಂದು ಆತನಿಗೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

2015ರ ಎ.15ರಂದು ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯ ವಸತಿಗೃಹವೊಂದರಲ್ಲಿ ಅಜಯ್ ಕುಮಾರ್ ಎಂದು ಹೇಳಿಕೊಂಡು ರೂಂ ಬುಕ್ ಮಾಡಿದ್ದ ಅಫ್ಜಲ್ ಖಾನ್, ಗಂಗೊಳ್ಳಿಯ ಲೀಲಾವತಿ ದೇವಾಡಿಗ(55) ಎಂಬವರನ್ನು ಗಂಗೊಳ್ಳಿಯ ದೇವಸ್ಥಾನಕ್ಕೆ ದೇಣಿಗೆ ಕೊಡುವುದಾಗಿ ಕರೆಸಿದ್ದನು. ಅಲ್ಲಿ ಆಕೆಗೆ ಜ್ಯೂಸ್‌ನಲ್ಲಿ ಅಮಲು ಪದಾರ್ಥ ಬೆರೆಸಿ ಕುಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿದ್ದನು. ನಂತರ ವಿದ್ಯುತ್ ವಯರ್‌ನಿಂದ ಆಕೆಯ ಕತ್ತು ಹಿಸುಕಿ ಕೊಲೆಗೈದು ಆಕೆಯ ಹೆಸರಲ್ಲಿ ಈತನೇ ನಕಲಿ ಡೆತ್ ನೋಟ್ ಬೇರೊಬ್ಬರಿಂದ ಬರೆಸಿ, ಚಿನ್ನಾಭರಣ, ಮೊಬೈಲ್ ಸುಲಿಗೆ ಮಾಡಿ ಮುಂಬಯಿಗೆ ಪರಾರಿಯಾಗಿದ್ದನು ಎಂದು ದೂರಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಆಗಿನ ಕುಂದಾಪುರ ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ್ ನೇತೃತ್ವದ ತಂಡ ಆರೋಪಿಯನ್ನು ಮುಂಬೈಯಲ್ಲಿ ಬಂಧಿಸಿತ್ತು. ನಂತರ ಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ 45 ಸಾಂದರ್ಭಿಕ ಸಾಕ್ಷಿಗಳ ಪೈಕಿ 25 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರಕಾಶ್ ಖಂಡೇರಿ, ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯ ಪಟ್ಟು ಆತನನ್ನು ದೋಷಿ ಎಂದು ತೀರ್ಪು ನೀಡಿದರು. ಶಿಕ್ಷೆಯ ಪ್ರಮಾಣವನ್ನು ಮಾ.26ರಂದು ಪ್ರಕಟಿಸುವುದಾಗಿ ಅವರು ತಿಳಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News