ಇರಾಕ್‌ನಲ್ಲಿ 39 ಭಾರತೀಯರ ಹತ್ಯೆ: ಕೇಂದ್ರ ಸರಕಾರದ ವಿರುದ್ಧ ಮೃತರ ಕುಟುಂಬಸ್ಥರ ಆಕ್ರೋಶ

Update: 2018-03-20 16:24 GMT
ಗೋಪಿಂದರ್ ಕೌರ್

ಹೊಸದಿಲ್ಲಿ, ಮಾ. 20: 2014ರಲ್ಲಿ ಐಸಿಸ್‌ನಿಂದ 39 ಭಾರತೀಯರು ಅಪಹೃತರಾಗಿ ಹತ್ಯೆಗೀಡಾಗಿರುವುದರ ಬಗ್ಗೆ ಕೂಡಲೇ ಮಾಹಿತಿ ನೀಡಿದಿರುವ ಕೇಂದ್ರ ಸರಕಾರವನ್ನು ಅವರ ಕುಟುಂಬಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ‘‘ಡಿಎನ್‌ಎ ವರದಿ ನೀಡುವಂತೆ ನಾವು ಸರಕಾರವನ್ನು ಆಗ್ರಹಿಸುತ್ತೇವೆ. ಈ ಘಟನೆಯನ್ನು ರಾಜಕೀಯಗೊಳಿಸಲಾಗುತ್ತಿದೆ. ನಾವು ಕಳೆದ ನಾಲ್ಕು ವರ್ಷಗಳಿಂದ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದೇವೆ. ನಮ್ಮವರನ್ನು ಕಳೆದುಕೊಂಡಿದ್ದೇವೆ ಎಂಬುದು ಈಗ ಟಿವಿ ಮೂಲಕ ನಮಗೆ ತಿಳಿಯಿತು’’ ಎಂದು ಹತ್ಯೆಗೀಡಾದ ಮಾಂಜಿಂದರ್ ಸಿಂಗ್‌ನ ಸಹೋದರಿ ಗೋಪಿಂದರ್ ಕೌರ್ ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಮಾಹಿತಿ ಸ್ವೀಕರಿಸಿದ ಕೂಡಲೇ ನಮ್ಮನ್ನು ಸಂಪರ್ಕಿಸಬೇಕಿತ್ತು. ಆದುದರಿಂದ ಅವರು ದ್ರೋಹ ಎಸಗಿದ್ದಾರೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದ್ದಾರೆ. ‘‘ಡಿಎನ್‌ಎ ಪರೀಕ್ಷೆಗೆ ಸರಕಾರ ನಮ್ಮಲ್ಲಿ ಕೇಳಿದಾಗ ನಮಗೆ ಅನುಮಾನ ಬಂದಿತ್ತು. ನನ್ನ ಸಹೋದರನಿಗೆ ಗಂಭೀರವಾದುದು ಏನೋ ಸಂಭವಿಸಿದೆ ಎಂದು ತಿಳಿಯಿತು. ಆದರೆ, ಸರಕಾರ ಡಿಎನ್‌ಎ ಮಾದರಿ ಸಂಗ್ರಹಿಸುವ ಉದ್ದೇಶ ಬಹಿರಂಗಪಡಿಸಲಿಲ್ಲ. ಇಂದಿನ ಸುದ್ದಿ ನಮ್ಮೆಲ್ಲರನ್ನೂ ಕುಸಿಯುವಂತೆ ಮಾಡಿದೆ’’ ಎಂದು ಕೌರ್ ಹೇಳಿದ್ದಾರೆ. ‘‘ನಮ್ಮವರು ಜೀವಂತವಾಗಿ ಇದ್ದಾರೆ, ಅವರನ್ನು ಹಿಂದಕ್ಕೆ ಕರೆ ತರಲಾಗುವುದು ಎಂದು ಅವರು ಹೇಳಿರುವುದು ಯಾಕೆ ? ಅವರು ಜೀವಂತವಾಗಿದ್ದರೆ ಮಾತ್ರ ಹಿಂದೆ ತರಲಾಗುವುದು ಎಂದು ಹೇಳಬಹುದಿತ್ತು. ನಾನು ಡಿಎನ್‌ಎ ವರದಿ ನೋಡಲು ಬಯಸುತ್ತೇನೆ. ಸಚಿವೆಯನ್ನು ಭೇಟಿಯಾದ ಬಳಿಕವೇ ನಮಗೆ ಉತ್ತರ ಸಿಗಬಹುದು’’ ಎಂದು ಕೌರ್ ಹೇಳಿದ್ದಾರೆ. ‘‘ನಾನು 7 ವರ್ಷಗಳ ಹಿಂದೆ ಇರಾಕ್‌ನಿಂದ ಹಿಂದಿರುಗಿದ್ದೇನೆ. ನಾವು ಪರಸ್ಪರ ಮಾತನಾಡಿರುವುದು 2015ರಲ್ಲಿ. ಎರಡು ಮೂರು ತಿಂಗಳ ಹಿಂದೆ ನಮ್ಮ ಡಿಎನ್‌ಎ ಮಾದರಿಗಳನ್ನು ಸರಕಾರ ತೆಗೆದುಕೊಂಡಿದೆ. ಏನು ಹೇಳಬೇಕು ಎಂದು ನನಗೆ ತಿಳಿಯುತ್ತಿಲ್ಲ’’ ಎಂದು ಹತ್ಯೆಯಾಗಿರುವ ರೂಪ್ ಲಾಲ್ ಅವರ ಪತ್ನಿ ಕಮಲ್‌ಜೀತ್ ಕೌರ್ ಹೇಳಿದ್ದಾರೆ. ನಾವು ಈಗ ಏನು ಹೇಳಲಿ. ಈ ಎಲ್ಲ ವರ್ಷಗಳಲ್ಲಿ ಸರಕಾರ ನಮ್ಮನ್ನ ಕತ್ತಲಲ್ಲಿ ಇರಿಸಿತು. ನಾವು ಕೇಂದ್ರ ಸಚಿವೆ (ಸುಷ್ಮಾ ಸ್ವರಾಜ್)ಯನ್ನು 11...12 ಬಾರಿ ಭೇಟಿಯಾಗಿದ್ದೆವು. ನಾಪತ್ತೆಯಾದವರು ಜೀವಂತವಾಗಿ ಇದ್ದಾರೆ ಎಂದು ಅವರು ಹೇಳಿದ್ದರು. ಸರಕಾರ ತಪ್ಪು ಹೇಳಿಕೆ ನೀಡುವುದಕ್ಕಿಂತ ನಾಪತ್ತೆಯಾದ ಭಾರತೀಯರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಹೇಳಬಹುದಿತ್ತು ಎಂದು ಐಸಿಸ್‌ನಿಂದ ಹತ್ಯೆಗೀಡಾದ ನಿಶಾನ್‌ನ ಸಹೋದರ ಸರ್ವನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News