ದೇಶದಲ್ಲಿ ಬಿಜೆಪಿ ಹಣಕೊಟ್ಟು ನಾಯಕರನ್ನು ಖರೀದಿಸಿ ಅಧಿಕಾರ ಹಿಡಿಯುತ್ತಿದೆ : ರಾಹುಲ್ ಗಾಂಧಿ

Update: 2018-03-20 17:21 GMT

ಮಂಗಳೂರು,ಮಾ,19: ಹಿಂಸೆಯ ,ಹಣ ಬಲದ ಮೂಲಕ ಅಧಿಕಾರ ಬಿಜೆಪಿ ಅಧಿಕಾರ ಹಿಡಿಯುತ್ತಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಅವರು ನಗರದಲ್ಲಿ ಜನಾಶೀರ್ವಾದ ಯಾತ್ರೆಯನ್ನು ಮುಗಿಸಿ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಜನಾಶೀರ್ವಾದ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ದೇಶದಲ್ಲಿ ಬಿಜೆಪಿ ಮೇಘಾಲಯ,ಮಣಿಪುರ,ಗೋವಾಗಳಲ್ಲಿ ಹಣಕೊಟ್ಟು ನಾಯಕರನ್ನು ಖರೀದಿಸಿ ಅಧಿಕಾರ ಹಿಡಿಯುತ್ತಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಕೊಲೆ ಆರೋಪವನ್ನು ಎದುರಿಸುತ್ತಿದ್ದಾರೆ. ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ಕೌರವ ಪಾಂಡವರ ನಡುವೆ ಯುದ್ಧ ನಡೆದಿತ್ತು. ಕೌರವರು ಅಧಿಕಾರಕ್ಕಾಗಿ ಯುದ್ಧದಲ್ಲಿ ದೊಡ್ಡ ಸೇನೆಯೊಂದಿಗೆ ಇದ್ದರು. ಪಾಂಡವರು ಸತ್ಯದ ಸ್ಥಾಪನೆಗಾಗಿ ಯುದ್ಧ ಮಾಡಿದರು. ಅದೇ ರೀತಿ ದೇಶದಲ್ಲಿ ಬಿಜೆಪಿ ಅಧಿಕಾರಕ್ಕಾಗಿ ಸುಳ್ಳು ಹೇಳುತ್ತಾ ಜನರನ್ನು ವಂಚಿಸುತ್ತಿದ್ದಾರೆ. ಕಾಂಗ್ರೆಸ್ ಸತ್ಯದ ಹಾದಿಯಲ್ಲಿ ಸಾಗುತ್ತಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು. ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆಯ ಸಂದರ್ಭದಲ್ಲಿ ಕಾರ್ಯಕರ್ತರ ಅಭಿಪ್ರಾಯಗಳಿಗೆ ಮನ್ನಣೆ ನೀಡಲಾಗುವುದು ಎಂದು ರಾಹುಲ್ ಗಾಂಧಿ ತಿಳಿಸಿದರು.

ಮೋದಿಯವರೇ ನುಡಿದಂತೆ ನಡೆಯಿರಿ: ಬಸವಣ್ಣ ,ನಾರಾಯಣಗುರುಗಳು,ಕೋಟಿ ಚೆನ್ನಯ,ರಾಣಿ ಅಬ್ಬಕ್ಕ ಹೇಳಿದಂತೆ ನಾವು ಸಾಗುತ್ತಿದ್ದೇವೆ. ಮೋದಿ ಬಸವಣ್ಣ ,ನಾರಾಯಣ ಗುರುಗಳ ಹೆಸರು ಹೇಳುತ್ತಾರೆ. ಆದರೆ ಅವರ ನೀಡಿದ ಸಂದೇಶದಂತೆ ನಡೆಯುದಿಲ್ಲ. ಮೋದಿಯವರೆ ಮೊದಲು ನುಡಿದಂತೆ ನಡೆಯಿರಿ ಎಂದು ರಾಹುಲ್ ತಿಳಿಸಿದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನುಡಿದಂತೆ ನಡೆದಿದೆ. ರೈತರ ಸಾಲ ಮನ್ನಾ ಮಾಡಿದೆ. ಅನ್ನ ಭಾಗ್ಯದಂತಹ ಕಾರ್ಯಕ್ರಮದ ಮೂಲಕ ಬಡವರಿಗೆ ನೆರವಾಗಿದೆ ಎಂದು ರಾಹುಲ್ ಶ್ಲಾಘಿಸಿದರು.

ನಮ್ಮದು ಸಾಮಾಜಿಕ ನ್ಯಾಯದ ಪರವಾದ ಸರಕಾರ: ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧ ವಾಗಿ ನಡೆದುಕೊಳ್ಳುತ್ತಿದೆ. ಕರ್ನಾಟಕ ಸರಕಾರ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ,ಪಂಗಡದವರ ಜಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮೀಸಲಿಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಆದರೆ ಕೇಂದ್ರ ಸರಕಾರ ವಾಗಲೇ ದೇಶದ ಇತರ ಕಡೆ ಅಧಿಕಾರದಲ್ಲಿರುವ ಬಿಜೆಪಿ ಸರಕಾರಗಳು ಈ ರೀತಿಯ ಯಾವ ಕ್ರಮವನ್ನು ಕೈ ಗೊಂಡಿಲ್ಲ. ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಮಾಕ್ ಹಾಗೂ ಶೆಡ್ಯೂಲ್ಡ್ ಬ್ಯಾಂಕ್‌ಗಳ ರೈತರ ಸಾಲಮನ್ನಾ ಮಾಡಲು ಮುಂದಾಗಲಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಾ, ನಮ್ಮದು ನುಡಿದಂತೆ ನಡೆದ ಸರಕಾರ ಎಂದರು. ಹಿಂದು-ಮುಸ್ಲಿಂ ನಡುವೆ ಕೋಮು ವಿಷ ಬೀಜ ಬಿತ್ತಿ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿಗೆ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎನ್ನುವ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸ್ವಾಗತಿಸಿದರು. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಲೋಕ ಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ವೀರಪ್ಪ ಮೊಯ್ಲಿ, ಮುನಿಯಪ್ಪ ರಾಜ್ಯ ಸರಕಾರದ ಇಂಧನ ಸಚಿವ ಡಿ.ಕೆ.ಶಿವ ಕುಮಾರ್, ಸಚಿವ ಎಸ್.ಆರ್.ಪಾಟೀಲ್ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಪ್ರಮೋದ್ ಮಧ್ವರಾಜ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ವೇಣುನಾಥ್,ಬಿ.ಕೆ.ಹರಿಪ್ರಸಾದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಶಾಸಕರಾದ ಅಭಯ ಚಂದ್ರ ಜೈನ್, ಮೊಯ್ದಿನ್ ಬಾವ, ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ವಸಂತ ಬಂಗೇರ, ವಿನಯ ಕುಮಾರ್ ಸೊರಕೆ, ಐವನ್ ಡಿ ಸೋಜ, ಮನಪಾ ಮೇಯರ್ ಭಾಸ್ಕರ ಮೊಯ್ಲಿ, ಮುಹಮ್ಮದ್ ಮಸೂದ್, ಮಂಜುನಾಥ ಭಂಡಾರಿ, ಕೋಡಿಜಾಲ್ ಇಬ್ರಾಹಿಂ, ಬಿ.ಎಚ್.ಖಾದರ್, ಎ.ಸಿ.ಭಂಡಾರಿ, ಮಮತಾ ಗಟ್ಟಿ, ಕಣಚೂರು ಮೋನು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News