ಸರ್ವ ಧರ್ಮೀಯರ ರಕ್ಷಣೆ ಕಾಂಗ್ರೆಸ್ ಬದ್ಧತೆ : ಸುರತ್ಕಲ್‌ನಲ್ಲಿ ಸಿಎಂ ಸಿದ್ದರಾಮಯ್ಯ

Update: 2018-03-20 17:43 GMT

ಸುರತ್ಕಲ್, ಮಾ.20: ಸರ್ವ ಧರ್ಮೀಯರ ರಕ್ಷಣೆ ಕಾಂಗ್ರೆಸ್‌ನ ಬದ್ಧತೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುರತ್ಕಲ್‌ನಲ್ಲಿ ಮಂಗಳವಾರ ನಡೆದ ‘ಜನಾಶೀರ್ವಾದ ಯಾತ್ರೆ’ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ವ ಧರ್ಮೀಯರಿಗೂ ನ್ಯಾಯ, ಸಮಾನತೆ ಕಾಂಗ್ರೆಸ್‌ನ ಸಿದ್ಧಾಂತವಾಗಿದೆ ಎಂದರು.

ಬಿಜೆಪಿಯ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಕೇವಲ ಘೋಷಣೆಗೆ ಸೀಮಿತವಾಗಿದೆ. ಆದರೆ, ಕಾಂಗ್ರೆಸ್ ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ತೋರಿಸಿಕೊಟ್ಟಿದೆ. ಕಾಂಗ್ರೆಸ್ ಪಕ್ಷ ಬಿಜೆಪಿಯಂತೆ ಡೋಂಗಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯದ್ದು, ರೈತ ಪರ, ದಲಿತ ಪರ, ಬಡವರ ಪರ ಕಾರ್ಯಕ್ರಮವಲ್ಲ. ಸಾಮಾಜಿಕ ಸಾಮರಸ್ಯವನ್ನು ಕೆಡಿಸುವುದು ಬಿಜೆಪಿಯ ಕಾರ್ಯಕ್ರಮವಾಗಿದೆ. ಈ ಮೂಲಕ ಅಧಿಕಾರವನ್ನು ಪಡೆಯಲು ಬಿಜೆಪಿ ಹವಣಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೊದಲಾದವರು ರಾಜ್ಯ ಪ್ರವಾಸ ಮಾಡಿದ್ದಾರೆ. ಮೋದಿಯವರು 100 ಬಾರಿ ರಾಜ್ಯಕ್ಕೆ ಬಂದರೂ ಅವರ ತಂತ್ರ ಫಲಿಸದು. ಈ ಬಾರಿ ಕಾಂಗ್ರೆಸ್ ಸರಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಮನವಿ : ವಿವಿಧ ಯೋಜನೆಗಳನ್ನು ಜಾರಿಗೆ ತಂದು ಬಡಜನರ ಪರವಾಗಿ ಆಡಳಿತ ನೀಡಿದ್ದೇವೆ. ನುಡಿದಂತೆ ನಡೆದಿರುವ ಕಾಂಗ್ರೆಸ್ ಸರಕಾರಕ್ಕೆ ಮತ್ತೊಮ್ಮೆ ಆಶೀರ್ವದಿಸುವಂತೆ ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಜನತೆಯಲ್ಲಿ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News