ಉತ್ತರ ಪ್ರದೇಶದಲ್ಲೊಂದು ವ್ಯಾಪಂ ಹಗರಣ : 600 ನಕಲಿ ವೈದ್ಯರು ಪತ್ತೆ!

Update: 2018-03-21 08:01 GMT

ಮೀರತ್,ಮಾ.21 : ವ್ಯಾಪಂ ಹಗರಣದಂತಹುದೇ ಹಗರಣವೊಂದು ಉತ್ತರ ಪ್ರದೇಶದಲ್ಲಿಯೂ ನಡೆದಿರಬಹುದೆಂಬ ಶಂಕೆಯೇಳಲು ಕಾರಣವಾಗುವಂತಹ ಬೆಳವಣಿಗೆ ನಡೆದಿದೆ.  ಪರೀಕ್ಷಾ ವಂಚನಾ ಮಾಫಿಯಾಗೆ ತಲಾ ಒಂದು ಲಕ್ಷ ರೂಪಾಯಿ ಲಂಚ ನೀಡಿದ ಆರೋಪದ ಮೇಲೆ ಮುಝಫ್ಫರನಗರ ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ವಿದ್ಯಾರ್ಥಿಗಳು ಉತ್ತರ ಬರೆಯಬೇಕಾದ ಸ್ಥಳಗಳ್ಲಲಿ ತಜ್ಞರೇ ಬರೆದ ಉತ್ತರಗಳನ್ನು ಸಲ್ಲಿಸಲು ಈ ಹಣ ನೀಡಲಾಗಿದೆಯೆಂದು ತಿಳಿದು ಬಂದಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ಇನ್ನೂ ಹಲವು ವಿದ್ಯಾರ್ಥಿಗಳ ಹೆಸರುಗಳು ಹೊರಬೀಳುವ ಸಾಧ್ಯತೆಯಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಮೆಡಿಕಲ್ ವಿದ್ಯಾರ್ಥಿಗಳು ವಂಚನೆ ನಡೆಸಲು ಸಹಕರಿಸಿದ ಗುಂಪಿನಲ್ಲಿದ್ದಾರೆನ್ನಲಾದ ಮೀರತ್ ನಗರದ ಪ್ರತಿಷ್ಠಿತ ಚೌಧುರಿ ಚರಣ್ ಸಿಂಗ್ ವಿವಿಯ ಆರು ಮಂದಿ ಅಧಿಕಾರಿಗಳ ಸಹಿತ ಒಂಬತ್ತು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಶಂಕೆಯಿದೆ.

2014ರಿಂದ ಈ ಜಾಲ ಕಾರ್ಯಾಚರಿಸುತ್ತಿದೆಯೆನ್ನಲಾಗಿದ್ದ ಕಲಿಕೆಯಲ್ಲಿ ಹಿಂದುಳಿದಿದ್ದ 600ಕ್ಕೂ ಅಧಿಕ ವಿದ್ಯಾರ್ಥಿಗಳು ಎಂಬಿಬಿಎಸ್ ಪರೀಕ್ಷೆ ತೇರ್ಗಡೆಯಾಗಿ ವೈದ್ಯರಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಬಂಧಿತ ಇಬ್ಬರು ವಿದ್ಯಾರ್ಥಿಗಳನ್ನು ಪರೀಕ್ಷಾ ವಂಚನೆ ಮಾಫಿಯಾಗೆ ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಪರಿಚಯಿಸಿದ್ದಳೆನ್ನಲಾಗಿದ್ದು ಆಕೆಯನ್ನು ಇನ್ನಷ್ಟೇ ಬಂಧಿಸಬೇಕಿದೆ.

ಈ ಜಾಲದ ರೂವಾರಿಯೆನ್ನಲಾದ ವ್ಯಕ್ತಿ ವಿವಿಯ ಉತ್ತರ ಪತ್ರಿಕೆ ಮೌಲ್ಯಮಾಪನಾ ವಿಭಾಗದ ಸಿಬ್ಬಂದಿಯ ಶಾಮೀಲಾತಿಯೊಂದಿಗೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಜಾಗದಲ್ಲಿ ತಜ್ಞರು ಉತ್ತರ ಬರೆದ ಪತ್ರಿಕೆಗಳನ್ನಿಡುತ್ತಿದ್ದರು. ಇದಕ್ಕಾಗಿ ಅವರು ವೈದ್ಯಕೀಯ ವಿದ್ಯಾರ್ಥಿಗಳಿಂದ ರೂ. 1 ಲಕ್ಷದಿಂದ 1.5 ಲಕ್ಷ ಪಡೆಯುತ್ತಿದ್ದರೆ ಇತರ ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳಿಂದ ರೂ. 30,000ದಿಂದ ರೂ 40,000 ತನಕ ಪಡೆಯುತ್ತಿದ್ದರು.

ಪ್ರಸಕ್ತ ತನಿಖೆ ಎದುರಿಸುತ್ತಿರುವ ಬಂಧಿತ ವಿದ್ಯಾರ್ಥಿ ಆಯುಶ್ ಕುಮಾರ್ (21), ಗುರ್ಗಾಂವ್ ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರ ವೈದ್ಯರೊಬ್ಬರ ಪುತ್ರನಾಗಿದ್ದು ಪಾನಿಪತ್ ನಿವಾಸಿಯಾಗಿದ್ದಾನೆ. ಇನ್ನೊಬ್ಬ ವಿದ್ಯಾರ್ಥಿ ಸ್ವರ್ಣಜೀತ್ ಸಿಂಗ್ (22) ಪಂಜಾಬ್‍ನ ಸಂಗ್ರೂರ್ ನವನಾಗಿದ್ದು  ಇಬ್ಬರೂ ಮುಝಫ್ಫರನಗರ ಮೆಡಿಕಲ್ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ.

2017ರ ಸೆಮಿಸ್ಟರ್ ಪರೀಕ್ಷೆಗಳ ಉತ್ತರ ಪತ್ರಿಕೆ ಬಂಡಲ್ ಗಳನ್ನು ಎಸ್‍ಟಿಎಫ್ ಸೀಲ್ ಮಾಡಿದೆ. ಈ ಪ್ರಕರಣದ ರೂವಾರಿ ಕವಿರಾಜ್ ಸಿಂಗ್ ಹೊರತಾಗಿ ಐದು ಮಂದಿ ವಿವಿ ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News