ಗೊಂದಲದ ವಿಡಿಯೋ ಮುಂದಿಟ್ಟು ಕೋಮುದ್ವೇಷ ಹರಡಲು ಮುಂದಾದ ಝೀ ಹಿಂದುಸ್ತಾನ್
ಹೊಸದಿಲ್ಲಿ, ಮಾ.21: ಇತ್ತೀಚೆಗೆ ಅರಾರಿಯಾ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಆರ್ ಜೆಡಿ ಬೆಂಬಲಿಗರೆಂದು ಹೇಳಲಾದ ಕೆಲವರು ಭಾರತ-ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಆರೋಪಿಸಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆರ್ ಜೆಡಿಯ ಸರ್ಫರಾಝ್ ಆಲಂ ಅವರ ವಿಜಯವನ್ನು ಆಚರಿಸುತ್ತಿದ್ದ ಈ ವ್ಯಕ್ತಿಗಳು 'ಭಾರತ್ ತೇರೇ ತುಕ್ಡೆ ಹೋಂಗೆ, ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಮೊದಲೇ ಊಹಿಸಿದಂತೆಯೇ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಮರೆಮಾಚಲು ಕೆಲ ಚಾನೆಲ್ ಗಳು ಈ ವಿಡಿಯೋವನ್ನೇ ದೊಡ್ಡ ಸುದ್ದಿಯಾಗಿಸಿತ್ತಲ್ಲದೆ, "ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳಲ್ಲಿ ಹಿಂದೂಗಳು ಅಪಾಯದಲ್ಲಿ'' ಎಂಬರ್ಥ ಮೂಡಿಸುವ ವರದಿಗಳು ಬಂದವು.
ಆದರೆ ಈ ವಿಡಿಯೋದ ಅಸಲಿಯತ್ತಿನ ಬಗ್ಗೆ ಅದರಲ್ಲಿ ಕಾಣಿಸಿಕೊಂಡಿರುವವರು ಹಾಗೂ ಅವರ ಕುಟುಂಬಗಳು ಶಂಕಿಸಿವೆ. ತನಿಖೆ ನಡೆಯುವ ತನಕ ಈ ಬಗ್ಗೆ ಊಹಾಪೋಹ ಮಾಡದಂತೆ ಪೊಲೀಸರು ಮಾಧ್ಯಮಗಳಿಗೆ ಸಲಹೆ ನೀಡಿದ್ದರೆ, ಈ ವೀಡಿಯೋದಲ್ಲಿ ಘೋಷಣೆಗಳು ಹಿನ್ನೆಲೆಯಲ್ಲಿ ಕೇಳಿಸುತ್ತಿರುವುದರಿಂದ ಅದನ್ನು ಮತ್ತೆ ಸೇರಿಸಲಾಗಿದೆ ಎಂಬುದು ಕುಟುಂಬ ಸದಸ್ಯರ ವಾದವಾಗಿದೆ. ಅದರಲ್ಲಿ ಕಾಣಿಸುವ ಮೂರು ಮಂದಿ 'ಕತ್ನೊ ಕರಿಯೊ ಬಾಪ್ ಬಾಪ್, ಲಲ್ಟೆನ್ ಛಾಪ್' (ವಿರೋಧಿಗಳು ಎಷ್ಟೇ ಪ್ರಯತ್ನಿಸಿದರೂ ಆರ್ ಜೆಡಿ ಗೆಲ್ಲುತ್ತದೆ) ಎಂದು ಹೇಳುತ್ತಿರುವುದು ಕೇಳಿಸುತ್ತದೆ.
ಸುದ್ದಿ ಸಂಸ್ಥೆಗಳು ಇದರ ಅಸಲಿಯತ್ತೇನು ಎಂದು ತಿಳಿಯುವ ಪ್ರಯತ್ನ ನಡೆಸದೇ ಇದ್ದರೂ AltNews.in ನಡೆಸಿದ ತನಿಖೆಯಿಂದ ಹಲವಾರು ಪ್ರಶ್ನೆಗಳು ಏಳುತ್ತವೆ. ಮಾರ್ಚ್ 16ರಂದು ಝೀ ಸಮೂಹದ 'ಝೀ ಹಿಂದುಸ್ತಾನ್' ಹಿಂದಿ ಸುದ್ದಿ ವಾಹಿನಿ 'ಜೀತಾ ಮುಸಲ್ಮಾನ್, ಅಬ್ ಅರಾರಿಯಾ ಆತಂಕಿಸ್ತಾನ್' ಎಂಬ ಶೀರ್ಷಿಕೆಯ ಚರ್ಚಾ ಕಾರ್ಯಕ್ರಮ ಪ್ರಸಾರ ಮಾಡಿತ್ತು. ವಿಡಿಯೋ ಅಸಲಿಯೇ ಎಂಬುದನ್ನು ದೃಢೀಕರಿಸಲು ಸಾಧ್ಯವಾಗಿಲ್ಲ ಎಂದು ಕಾರ್ಯಕ್ರಮದ ಆ್ಯಂಕರ್ ಹಲವಾರು ಬಾರಿ ಹೇಳಿದರೂ, ಚರ್ಚೆಯಲ್ಲಿ ಭಾಗವಹಿಸಿದವರು ಊಹಾಪೋಹಗಳನ್ನು ತಮ್ಮದೇ ಧಾಟಿಯಲ್ಲಿ ವಿವರಿಸುವ ಪ್ರಯತ್ನ ನಡೆಸಿದ್ದರು. ಇನ್ನೂ ಗೊಂದಲದಲ್ಲಿರುವ ವಿಡಿಯೋವನ್ನು ಆಧಾರವಾಗಿಟ್ಟು 'ಆತಂಕಿಸ್ತಾನ್' ಎಂಬ ಪದವನ್ನು ಈ ಚಾನೆಲ್ ಹೇಗೆ ಉಪಯೋಗಿಸಿತು ಎಂದು ಹಲವರು ಪ್ರಶ್ನಿಸಿದ್ದಾರೆ.
"ಅರಾರಿಯಾ ಕೇವಲ ನೇಪಾಳ ಮತ್ತು ಬಂಗಾಳಕ್ಕೆ ತಾಗಿಕೊಂಡಿರವ ಗಡಿ ಪ್ರದೇಶವಲ್ಲ. ಅದು ತೀವ್ರವಾದಿ ಸಿದ್ಧಾಂತದತ್ತ ಮುಖ ಮಾಡಿದೆ. ಇದು ಬಿಹಾರಕ್ಕಷ್ಟೇ ಅಲ್ಲ ಇಡೀ ದೇಶಕ್ಕೆ ಅಪಾಯಕಾರಿ. ಅದು ಉಗ್ರವಾದದ ಸ್ಥಾನವಾಗುವುದು'' ಎಂದು ಈ ವೀಡಿಯೋ ವೈರಲ್ ಆಗುವ ಮುಂಚೆಯೇ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದರು.
ಖಾಸಗಿ ಸುದ್ದಿ ವಾಹಿನಿಗಳನ್ನು ಪ್ರತಿನಿಧಿಸುವ ನ್ಯೂಸ್ ಬ್ರಾಡ್ ಕಾಸ್ಟರ್ಸ್ ಅಸೋಸಿಯೇಶನ್ ಎಂಬ ಸಂಸ್ಥೆಯ ಸ್ವನಿಯಂತ್ರಕ ದೂರು ನಿವಾರಣಾ ಘಟಕವಾಗಿರುವ ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟಾಂಡರ್ಡ್ ಅಥಾರಿಟಿ (ಎನ್ ಬಿ ಎಸ್ ಎ) ಬಳಿ ಈ ಬಗ್ಗೆ ಸಾಚಾರ್ ಸಮಿತಿಯ ಮಾಜಿ ನೋಡಲ್ ಅಧಿಕಾರಿ ಆಶಿಶ್ ಜೋಷಿ ದೂರು ದಾಖಲಿಸಿದ್ದರು. ಆದರೆ ತಮ್ಮ ದೂರಿಗೆ ಯಾವುದೇ ಸ್ಪಂದನೆ ದೊರೆಯದೇ ಇರುವುದು ಅವರಿಗೆ ಆತಂಕ ಮೂಡಿಸಿದೆ.
ಆದರೆ ತಮ್ಮ ಸುದ್ದಿ ವಾಹಿನಿ ಎನ್ ಬಿಎಸ್ ಎ ಮಾರ್ಗಸೂಚಿಗಳನ್ನು ಉಲ್ಲಂಘಿಸಿಲ್ಲ ಎಂದು ಝೀ ಸಮೂಹದ ಪ್ರಸನ್ನ ರಾಘವ್ ಹೇಳಿದ್ದಾರೆ. ಈ ಹಿಂದೊಮ್ಮೆ ಉರ್ದು ಕವಿ ಗೌಹರ್ ರಾಝಾ ಅವರನ್ನು ದೇಶವಿರೋಧಿ ಎಂದು ಹೇಳಿ ನಂತರ ಝೀ ನ್ಯೂಸ್ ಕ್ಷಮೆ ಕೋರಿತ್ತು.