ಕರ್ನಾಟಕದಲ್ಲಿ 23 ಹಿಂದುತ್ವ ಕಾರ್ಯಕರ್ತರನ್ನು ಮುಸ್ಲಿಮರು ಕೊಂದರೆ?

Update: 2018-03-21 10:05 GMT

# ಎಲ್ಲ 23 ಮಂದಿಯ ಮನೆಗೆ ಭೇಟಿ ನೀಡಿ ಕಂಡ ಸತ್ಯ ಏನು ?

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೇರಿದ ಮೇಲೆ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ, ಜಿಹಾದಿಗಳ ಕೃತ್ಯ ಮಿತಿ ಮೀರುತ್ತಿದೆ, ಇದುವರೆಗೆ 23 ಹಿಂದುತ್ವ ಕಾರ್ಯಕರ್ತರನ್ನು ಹತ್ಯೆಗೈಯಲಾಗಿದೆ ಎಂದು ಬಿಜೆಪಿ ಆರೋಪಿಸುತ್ತಲೇ ಇದೆ. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕೂಡ ಇದೇ ಆರೋಪದಲ್ಲಿ ಕೇಂದ್ರ ಗೃಹಸಚಿವರಿಗೆ ಪತ್ರವನ್ನೂ ಬರೆದಿದ್ದರು. ಈ ಬಗ್ಗೆ scroll.in ವಿಶೇಷ ತನಿಖಾ ವರದಿಯೊಂದನ್ನು ಪ್ರಕಟಿಸಿದ್ದು, ಈ ಆರೋಪಗಳ ಹಿಂದಿನ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ.

ಶೃತಿಸಾಗರ್ ಯಮುನನ್ ಅವರ ಈ ವಿಶೇಷ ವರದಿಯನ್ನು scroll.in ಪ್ರಕಟಿಸಿದೆ. ಶೋಭಾ ಕರಂದ್ಲಾಜೆಯವರ 'ಹತ್ಯೆಗೀಡಾದವರ ಪಟ್ಟಿ'ಯಲ್ಲಿರುವ ಎಲ್ಲಾ 23 ಮಂದಿಯ ಮನೆಗೂ ಶೃತಿಸಾಗರ್ ಯಮುನನ್ ಫೆಬ್ರವರಿ ಹಾಗು ಮಾರ್ಚ್ ತಿಂಗಳಲ್ಲಿ ಭೇಟಿ ನೀಡಿದ್ದರು. ಆರೋಪಗಳ ಹಿಂದಿನ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ಹೊರಟ ಇವರಿಗೆ ಪಟ್ಟಿಯಲ್ಲಿದ್ದ ಒಬ್ಬ ವ್ಯಕ್ತಿ ಬದುಕಿದ್ದಾರೆ ಎನ್ನುವುದು ಆಶ್ಚರ್ಯ ತರಿಸಿತ್ತು. ಇಬ್ಬರನ್ನು ಅವರ ಸಹೋದರಿಯರೇ ಕೊಂದ ಆರೋಪ ಎದುರಿಸುತ್ತಿದ್ದಾರೆ. ಇನ್ನು ಕೆಲ ಪ್ರಕರಣಗಳು ರಿಯಲ್ ಎಸ್ಟೇಟ್, ಪ್ರೇಮ ವ್ಯವಹಾರ ಹೀಗೆ ಹಲವು ಕಾರಣಗಳಿಂದ ನಡೆದಿವೆ.

scroll.in ಪ್ರಕಟಿಸಿದ ಶೃತಿಸಾಗರ್ ಯಮುನನ್ ವರದಿಯ ಮುಖ್ಯಾಂಶಗಳು ಇಲ್ಲಿವೆ...

ಉಪ್ಪಾರಹಟ್ಟಿಯ ಮಹಾದೇವ್ ಕಾಲೆಯವರನ್ನು 2016ರ ನವೆಂಬರ್ ತಿಂಗಳಲ್ಲಿ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಇಂದು ಉಪ್ಪಾರಹಟ್ಟಿಯಲ್ಲಿ ಸಣ್ಣ ಗುಡಿಸಲೊಂದರಲ್ಲಿ ಮಹಾದೇವ್ ಕಾಲೆಯವರ ಪತ್ನಿ ವಂದನಾ ಮಹಾದೇವ್ ವಾಸಿಸುತ್ತಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ರಿಗೆ ಸಲ್ಲಿಸಿದ್ದ 2014ರಿಂದ 'ಜಿಹಾದಿ ಶಕ್ತಿ'ಗಳಿಂದ ಹತ್ಯೆಯಾದ ಹಿಂದುತ್ವದ ಕಾರ್ಯಕರ್ತರ ಪಟ್ಟಿಯಲ್ಲಿ ಮಹಾದೇವ್ ಕಾಲೆಯವರ ಹೆಸರೂ ಸೇರಿದೆ. ಈ ಪಟ್ಟಿಯಲ್ಲಿರುವ 23 ವ್ಯಕ್ತಿಗಳನ್ನು ಶೋಭಾ ‘ಹಿಂದೂ ಕಾರ್ಯಕರ್ತರು’, ಬಿಜೆಪಿ ಅಥವಾ ಆರೆಸ್ಸೆಸ್ ಕಾರ್ಯಕರ್ತರು ಎಂದು ಗುರುತಿಸಿದ್ದರು. ಈ ಹತ್ಯೆಗಳ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈವಾಡವಿದೆ ಹಾಗು ಸಿದ್ದರಾಮಯ್ಯ ಅವರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದವರು ಆರೋಪಿಸಿದ್ದರು. ಈ ಹತ್ಯೆಗಳನ್ನು ಎನ್ ಐಎ ತನಿಖೆಗೊಳಪಡಿಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದ್ದರು.

ಆದರೆ ಉಪ್ಪಾರಹಟ್ಟಿಯಲ್ಲಿರುವ ಮಹಾದೇವ್ ಕಾಲೆಯವರ ಪತ್ನಿ ವಂದನಾ ಮಹಾದೇವ್ ಬಿಜೆಪಿ ಪಟ್ಟಿಯಲ್ಲಿ ತನ್ನ ಪತಿಯ ಹೆಸರಿರುವುದನ್ನು ಕೇಳಿ ಒಂದು ಕ್ಷಣ ಆಘಾತಕ್ಕೊಳಗಾದರು. “ಅದು ಸರಿಯಲ್ಲ. ಇಲ್ಲಿ ನಮಗೆ ಮುಸ್ಲಿಮರೊಂದಿಗೆ ಯಾವ ಸಮಸ್ಯೆಯೂ ಇಲ್ಲ” ಎಂದವರು ಹೇಳುತ್ತಾರೆ. ರಾಜಕೀಯ ದ್ವೇಷದಿಂದ ತನ್ನ ಪತಿಯ ಹತ್ಯೆಯಾಗಿತ್ತು. ತನ್ನ ಪತಿ ಊರಿನ ಮುಖ್ಯಸ್ಥರಾಗಿದ್ದರು. ಪತಿಯ ಮೇಲೆ ದಾಳಿ ನಡೆಸಿದ್ದವರು ಕಾಂಗ್ರೆಸ್ ಜೊತೆ ಸಂಬಂಧವಿದ್ದವರಾಗಿದ್ದರು ಎಂದವರು ಹೇಳುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಎಫ್ ಐಆರ್ ನಲ್ಲಿರುವ ಹೆಸರುಗಳು ಅಮೋಘ್ ಸಿದ್ದ ಅಲಿಯಾಸ್ ಭೀಮಶಾ ಯಾದವೆ, ನ್ಯಾನು ಹಾಗು ಗೋಪು.

ಇನ್ನು ಮೂರು ಪ್ರಕರಣಗಳಲ್ಲಿ ಮೃತ ಮೂವರಿಗೆ ಅವರು ಸಾವನ್ನಪ್ಪುವವರೆಗೆ ಸಂಘಪರಿವಾರದೊಂದಿಗೆ ಯಾವುದೇ ಸಂಬಂಧವಿರಲಿಲ್ಲ. ಅವರ ಮೃತಪಟ್ಟು ದಿನಗಳೊಳಗಾಗಿ ಬಿಜೆಪಿ ಹಾಗು ಆರೆಸ್ಸೆಸ್ ನಾಯಕರು ಮೃತರ ಮನೆಗೆ ಆಗಮಿಸಿದರು, ಪ್ರತಿಭಟನೆಗಳು ನಡೆದವು, ಸಂಘಪರಿವಾರ ಸಂಘಟನೆಗಳು ಮೃತರ ಕುಟುಂಬಗಳಿಗೆ ಪರಿಹಾರವನ್ನೂ ವಿತರಿಸಿತು.

ಕರಂದ್ಲಾಜೆಯವರ 'ಹತ್ಯೆಯಾದವರ ಪಟ್ಟಿ'ಯಲ್ಲಿರುವ ಮೊದಲ ಹೆಸರು ಅಶೋಕ್ ಪೂಜಾರಿ ಮೂಡುಬಿದಿರೆಯ ನಿವಾಸಿ ಇವರು. ಆದರೆ ಇವರು ಮೃತಪಟ್ಟಿಲ್ಲ. ಸೆಪ್ಟಂಬರ್ 20, 2015ರಂದು ಮನೆಗೆ ಹಿಂತಿರುಗುತ್ತಿದ್ದಾಗ ದುಷ್ಕರ್ಮಿಗಳ ತಂಡವೊಂದು ಇವರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿತ್ತು. ಮುಸ್ತಫಾ, ಹನೀಫ್ ಹಾಗು ಕಬೀರ್ ಇವರ ಮೇಲೆ ದಾಳಿ ನಡೆಸಿದ ಆರೋಪಿಗಳೆಂದು ಪೊಲೀಸರ ಚಾರ್ಜ್ ಶೀಟ್ ನಲ್ಲಿದೆ.

ದಾಳಿಯ ನಂತರ ಮೂರು ತಿಂಗಳ ಕಾಲ ಅವರು ಆಸ್ಪತ್ರೆಯಲ್ಲಿದ್ದರು. ಸಂಸದೆ ಕರಂದ್ಲಾಜೆಯವರ ‘ಸತ್ತವರ ಪಟ್ಟಿ’ಯಲ್ಲಿ ತನ್ನ ಹೆಸರಿರುವುದನ್ನು ಕಂಡ ಅಶೋಕ್ ಪೂಜಾರಿ ಮತ್ತೊಮ್ಮೆ ಆಘಾತಕ್ಕೊಳಗಾಗಿದ್ದರು. ಈ ಬಗ್ಗೆ ನಂತರ ಶೋಭಾ ಕರಂದ್ಲಾಜೆ ಕ್ಷಮೆ ಯಾಚಿಸಿದ್ದರು.

ಅಕ್ಟೋಬರ್ 9ರಂದು ಪ್ರಶಾಂತ್ ಪೂಜಾರಿ ಎಂಬವರ ಕೊಲೆಯಾಯಿತು. ಮೂರು ಬೈಕ್ ಗಳಲ್ಲಿ ಆಗಮಿಸಿದ ಮೂವರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ. ಗೋಹತ್ಯೆಯನ್ನು ತಡೆದದ್ದಕ್ಕಾಗಿ ಪ್ರಶಾಂತ್ ಪೂಜಾರಿಯನ್ನು ಕೊಲೆಗೈಯಲಾಗಿದೆ ಎಂದು ಕುಟುಂಬಸ್ಥರು ಆರೋಪಿಸುತ್ತಾರೆ. ಅವರು ಗೋಸಾಗಾಟವನ್ನು ನಿಲ್ಲಿಸಿದ್ದರು ಎಂದು ಪ್ರಶಾಂತ್ ರ ತಂದೆ ಆನಂದ್ ಪೂಜಾರಿ ಆರೋಪಿಸುತ್ತಾರೆ. ಪಿಎಫ್ ಐ ಕಾರ್ಯಕರ್ತರೇ ತನ್ನ ಪುತ್ರನನ್ನು ಕೊಂದಿದ್ದಾರೆ ಎಂದವರು ಪದೇ ಪದೇ ಹೇಳುತ್ತಾರೆ.

ಕರಾವಳಿಯಲ್ಲಿ ಕೋಮು ದ್ವೇಷದ ಘಟನೆಗಳು ನಡೆಯುತ್ತಿದ್ದಂತೆ ಅಕ್ಟೋಬರ್ 15ರಂದು ವಾಮನ ಪೂಜಾರಿ ಎಂಬವರು ಮೃತಪಟ್ಟರು. ಪ್ರಶಾಂತ್ ಪೂಜಾರಿಯವರ ಅಂಗಡಿಯ ಸಮೀಪವೇ ಇವರ ಅಂಗಡಿಯಿತ್ತು. ತನ್ನ ಪುತ್ರನ ಕೊಲೆಗೆ ವಾಮನ ಪೂಜಾರಿ ಸಾಕ್ಷಿಯಾಗಿದ್ದರು ಎಂದು ಪ್ರಶಾಂತ್ ಪೂಜಾರಿಯ ತಂದೆ ಹೇಳಿದರೆ, ಶೋಭಾ ಕರಂದ್ಲಾಜೆಯವರ ‘ಜಿಹಾದಿ ಶಕ್ತಿ’ಗಳಿಂದ ಕೊಲೆಗೀಡಾವರ ಪಟ್ಟಿಯಲ್ಲಿ ಇವರ ಹೆಸರೂ ಇದೆ. ಆದರೆ ವಾಮನ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಹಾಗು ಪೊಲೀಸರು ಹೇಳುತ್ತಾರೆ. ಪ್ರಶಾಂತ್ ಪೂಜಾರಿ ಹತ್ಯೆಯ ನಂತರ ಅವರು ಖಿನ್ನರಾಗಿದ್ದರು.ಯಾವಾಗಲೂ ಅದೇ ವಿಷಯದ ಬಗ್ಗೆ ಮಾತನಾಡುತ್ತಿದ್ದರು ಹಾಗು ಸರಿಯಾಗಿ ತಿನ್ನುತ್ತಿರಲಿಲ್ಲ ಎಂದು ವಾಮನರ ಪತ್ನಿ ಸರೋಜಿನಿ ಪೂಜಾರಿ ಹೇಳುತ್ತಾರೆ.

ವಾಮನ ಪೂಜಾರಿಯವರಿಗೆ ಸಂಘಪರಿವಾರ ಸಂಘಟನೆಯೊಂದಿಗೆ ಸಂಬಂಧವಿತ್ತೇ ಎನ್ನುವ ಪ್ರಶ್ನೆಗೆ ಇಲ್ಲ ಎಂದು ಅವರು ಉತ್ತರಿಸುತ್ತಾರೆ. “ಆ ಪಟ್ಟಿಯಲ್ಲಿ ನನ್ನ ಪತಿಯ ಹೆಸರು ಹಾಕುವುದಕ್ಕೆ ಮೊದಲು ಕರಂದ್ಲಾಜೆ ನಮ್ಮ ಬಳಿ ಕೇಳಬೇಕಿತ್ತು” ಎಂದವರು ಹೇಳುತ್ತಾರೆ.

ಶೋಭಾ ಕರಂದ್ಲಾಜೆಯವರು ನೀಡಿದ 'ಹತ್ಯೆಗೀಡಾದವರ ಪಟ್ಟಿ'ಯಲ್ಲಿದ್ದ ಒಬ್ಬರು ಇನ್ನೂ ಜೀವಂತವಾಗಿದ್ದಾರೆ. ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರೇ ಹೇಳುತ್ತಾರೆ. ಮತ್ತಿಬ್ಬರ ಕೊಲೆ ಪ್ರಕರಣದಲ್ಲಿ ಸಹೋದರಿಯರೇ ಪ್ರಮುಖ ಆರೋಪಿಗಳಾಗಿದ್ದಾರೆ. ಹೆಚ್ಚಿನ ಕೊಲೆಗಳಿಗೆ ರಿಯಲ್ ಎಸ್ಟೇಟ್ ವ್ಯವಹಾರ, ರಾಜಕೀಯ, ಚುನಾವಣೆ ಹಾಗು ಪ್ರೇಮ ಸಂಬಂಧಗಳೇ ಕಾರಣಗಳಾಗಿವೆ. ಈ ಬಗ್ಗೆ ತನಿಖಾಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. 24ರಲ್ಲಿ 10 ಪ್ರಕರಣಗಳಲ್ಲಿ ಮಾತ್ರ ಮುಸ್ಲಿಮ್ ಸಂಘಟನೆಗಳಿಗೆ ಸಂಬಂಧವಿದೆ ಎನ್ನುವುದಕ್ಕೆ ಸಾಕ್ಷಿಗಳಿವೆ ಎಂದು scroll.in ವರದಿ ಮಾಡಿದೆ.

scroll.inನ ಸಂಪೂರ್ಣ ವರದಿ ಶೀಘ್ರ ಪ್ರಕಟವಾಗಲಿದೆ...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News