ವೇತನ ಕಡಿತಕ್ಕಾಗಿ ಸ್ಪೀಕರ್ ಗೆ ಪತ್ರ ಬರೆದ ಬಿಜೆಪಿ ಸಂಸದ!
ಹೊಸದಿಲ್ಲಿ,ಮಾ.21 : ಸತತ 13ನೇ ದಿನ ಸಂಸತ್ತಿನ ಕಾರ್ಯಕಲಾಪಗಳಿಗೆ ಅಡ್ಡಿಯಾಗಿರುವುದರಿಂದ ಅಸಮಾಧಾನಗೊಂಡಿರುವ ಬಿಜೆಪಿ ಸಂಸದ ಮನೋಜ್ ತಿವಾರಿ ಲೋಕಸಭಾ ಸ್ಪೀಕರ್ ಅವರಿಗೆ ಪತ್ರ ಬರೆದು ಸಂಸದರಿಗೆ ಶಿಕ್ಷೆಯ ರೂಪದಲ್ಲಿ ವೇತನ ಕಡಿತಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
'ನೋ ವರ್ಕ್, ನೋ ಪೇ' ನೀತಿಯನ್ನು ಅನುಸರಿಸಿ ಸಂಸತ್ತಿನಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಲು ವಿಫಲರಾದ ಸಂಸದರ ವೇತನ ಕಡಿತಗೊಳಿಸುವ ಪ್ರಸ್ತಾಪ ಮುಂದಿರಿಸಲು ಬಯಸುತ್ತೇನೆ, ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಬರೆದ ಪುತ್ರದಲ್ಲಿ ತಿವಾರಿ ಹೇಳಿದ್ದರೆ ಇದನ್ನು ವ್ಯಂಗ್ಯವಾಡಿರುವ ತೆಲಂಗಾಣ ರಾಷ್ಟ್ರ ಸಮಿತಿ ಸಂಸದೆ ಕೆ.ಕವಿತಾ ಟ್ವೀಟ್ ಮಾಡಿ 'ಇದು ಉಲ್ಟಾ ಚೋರ್ ಕೋತ್ವಾಲ್ ಕೊ ಡಾಂಟೆ' ತರಹ ಆಗಿದೆ. ಸರಕಾರ ಸಮಸ್ಯೆಗಳನ್ನು ಪರಿಹರಿಸಿದರೆ ಯಾವುದೇ ಪಕ್ಷ ಅಥವಾ ಸಂಸದನಿಗೆ ಪ್ರತಿಭಟನೆ ನಡೆಸಲು ಇಚ್ಛೆಯಾಗದು ಎಂದಿದ್ದಾರೆ.
ತೆಲುಗು ದೇಶಂ ಪಕ್ಷವು ನರೇಂದ್ರ ಮೋದಿ ಸರಕಾರದ ವಿರುದ್ಧ ತರಲುದ್ದೇಶಿಸಿರುವ ಅವಿಶ್ವಾಸ ನಿಲುವಳಿಗೆ ಸಂಬಂಧಿಸಿದಂತೆ ಟಿಆರ್ ಎಸ್ ಬಿಜೆಪಿಗೆ ಬೆಂಬಲ ನೀಡುತ್ತಿದೆ ಎಂಬ ಆರೋಪವಿದೆ. ಅವಿಶ್ವಾಸ ನಿಲುವಳಿ ಮಂಡನೆಯಾದರೂ ತಟಸ್ಥ ನಿಲುವು ತಾಳಲು ಎಐಎಡಿಎಂಕೆ ಮತ್ತು ಟಿಆರ್ ಎಸ್ ಸದಸ್ಯರು ಉದ್ದೇಶಿಸಿದ್ದಾರೆ. ವಿಪಕ್ಷಗಳೆಲ್ಲವೂ ಈ ಅವಿಶ್ವಾಸ ನಿಲುವಳಿಗೆ ಬೆಂಬಲ ನೀಡಲು ನಿರ್ಧರಿಸಿರುವ ವಿಚಾರವಾಗಿಯೇ ಲೋಕಸಭೆಯಲ್ಲಿ ಕಾರ್ಯಕಲಾಪಗಳು ನಡೆಯದೆ ಹಲವು ದಿನಗಳಿಂದ ಗೊಂದಲ ಮುಂದುವರಿದಿದ್ದು ಇದಕ್ಕೆ ಟಿಆರ್ ಎಸ್ ಮತ್ತು ಎಐಎಡಿಎಂಕೆ ಕಾರಣವೆಂದು ಇತರ ಪಕ್ಷಗಳು ಆರೋಪಿಸುತ್ತಿವೆ.