×
Ad

ವಿನಾಯಕ ಬಾಳಿಗ ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆಗೆ ಆಗ್ರಹ: ದೇವದಾಸ್

Update: 2018-03-21 20:42 IST

ಮಂಗಳೂರು, ಮಾ.21: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ನಡೆದು ಎರಡು ವರ್ಷವಾದರೂ ದುಷ್ಕರ್ಮಿಗಳಿಗೆ ಶಿಕ್ಷೆ ಆಗದಿರುವುದನ್ನು ಖಂಡಿಸಿ ದೇಶ ಪ್ರೇಮಿ ಸಂಘಟನೆಗಳ ಒಕ್ಕೂಟ ನಗರದ ವೆಂಕಟ್ರಮಣ ದೇವಸ್ಥಾನದಿಂದ ವಿನಾಯಕ ಬಾಳಿಗ ಮನೆಯವರೆಗೆ ಇಂದು ವಿನಾಯಕ ಬಾಳಿಗ ಬಾಳಿಗ ಸ್ಮರಣೆ ಮತ್ತು ಮೆರವಣಿಗೆ ನಡೆಯಿತು.

ಬಳಿಕ ಸಿಬಿಇಯು ಸಭಾಂಗಣದಲ್ಲಿ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಬೇಕೆಂದು ದಲಿತ ಮುಖಂಡ ದೇವದಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಗ್ರಹಿಸಲಾಯಿತು.

ಪ್ರಕರಣದ ಪ್ರಮುಖ ಆರೋಪಿಯಿಂದ ಜಾಮೀನು ಶರ್ತುಗಳ ಉಲ್ಲಂಘನೆ:- ವಿನಾಯಕ ಬಾಳಿಗ ಪ್ರಕರಣದ ಪ್ರಮುಖ ಆರೋಪಿ ಜಾಮೀನು ಪಡೆದಿದ್ದರೂ ಜಾಮೀನು ಶರ್ತುಗಳನ್ನು ಉಲ್ಲಂಘಿಸಿ ಓಡಾಡುತ್ತಿದ್ದು, ಎರಡೂ ವರ್ಷವಾದರೂ ವಿನಾಯಕ ಬಾಳಿಗ ಹತ್ಯೆ ಆರೋಪಿಗಳಿಗೆ ಶಿಕ್ಷೆಯಾಗದೆ ಈ ಪ್ರಕರಣದಲ್ಲಿ ನ್ಯಾಯ ದೊರೆತಿಲ್ಲ, ಇದರ ವಿರುದ್ಧ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ದೇಶ ಪ್ರೇಮಿ ಸಂಘಟನೆಯ ಮುಖಂಡ ನರೇಂದ್ರ ನಾಯಕ್ ಹೇಳಿದರು.

ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಜಾಮೀನು ಪಡೆದಿದ್ದು, ಇದರ ವಿರುದ್ಧ ಹೋರಾಟ ಮುಂದುವರಿದಿದೆ ಎಂದು ನರೇಂದ್ರ ನಾಯಕ್ ತಿಳಿಸಿದ್ದಾರೆ. ವಿನಾಯಕ ಬಾಳಿಗ ಆರ್‌ಟಿಐ ಕಾರ್ಯಕರ್ತ ಹತ್ಯೆಗೀಡಾಗಿರುವುದು ನಾಗರಿಕ ಸಮಾಜಕ್ಕೆ ಅಪಮಾನ. ಅನ್ಯಾಯವಾದಾಗ ಪ್ರತಿಭಟಿಸುವುದು ಪ್ರತಿ ಯೊಬ್ಬರ ಹೊಣೆಗಾರಿಕೆಯಾಗಿದೆ ಎಂದರು.

ದೇಶದಲ್ಲಿ ಆರ್‌ಟಿಐ ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯ, ಕೊಲೆ:- ದೇಶದಲ್ಲಿ ಆರ್‌ಟಿಐ ಕಾರ್ಯಕರ್ತರ ಮೇಲೆ ದೌರ್ಜನ್ಯ ,ಕೊಲೆ ನಡೆಯುತ್ತಿದೆ ಎಂದು ಪಿ.ವಿ. ಭಂಡಾರಿ ತಿಳಿಸಿದರು.

ದೇಶದಲ್ಲಿ ಸುಮಾರು 63 ಆರ್‌ಟಿಐ ಕಾರ್ಯಕರ್ತರ ಕೊಲೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಮಾಹಿತಿ ಹಕ್ಕನ್ನು ಬಳಸಿ ಹೋರಾ ಡುತ್ತಿರುವ ಕಾರ್ಯಕರ್ತರನ್ನು ಕೊಲೆ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ ಎನ್ನುವುದರ ಸೂಚನೆ. ಇದರ ಹಿಂದೆ ಜನಸಮುದಾಯದ ಸಂಪತ್ತನ್ನು ಲೂಟಿ ಮಾಡುವವರು, ಅವರನ್ನು ಬೆಂಬಲಿಸುವವರು ಸರಕಾರ, ಜನ ಪ್ರತಿನಿಧಿಗಳು ಸೇರಿಕೊಂಡಿದ್ದಾರೆ. ವಿನಾಯಕ ಬಾಳಿಗ ಮಾಹಿತಿ ಹಕ್ಕಿನ ಪ್ರಕಾರ ಮಾಡಿದ ಕೆಲಸಕ್ಕೆ ಅವರಿಗೆ ನಾಗರಿಕ ಸಮಾಜದ ಸನ್ಮಾನ, ಪುರಸ್ಕಾರ ದೊರೆಯಬೇಕಾಗಿತ್ತು ಎಂದು ಭಂಡಾರಿ ತಿಳಿಸಿದರು.

ಸಭೆಯಲ್ಲಿ ಪ್ರೊ. ಪಂಡಿತಾರಾಧ್ಯ, ಕೇಶವ ಧರಣಿ , ವಿಲ್ಫ್ರೆಡ್ ಡಿಸೋಜ, ವಿನಾಯಕ ಬಾಳಿಗರವರ ಸಹೋದರಿ ಹರ್ಷ ಬಾಳಿಗ ಸಭೆಯನ್ನುದ್ದೇಶಿಸಿ ಮಾತ ನಾಡಿದರು. ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ವಾಸುದೇವ ಉಚ್ಚಿಲ್, ಗುಲಾಬಿ ಬಿಳಿಮಲೆ, ವಿ.ಕೆ.ಕುಕ್ಯಾನ್, ಇಮ್ತಿಯಾಝ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News