ಎಂಪಿಎಲ್ 4: ಉಳ್ಳಾಲ, ಎಲಿಗೆಂಟ್, ಟಿ4 ಸೂಪರ್ ಕಿಂಗ್ ತಂಡಗಳಿಗೆ ಜಯ
ಮಂಗಳೂರು , ಮಾ.21: ಬ್ರಾಂಡ್ ವಿಷನ್ ಈವೆಂಟ್ಸ್, ಮಂಗಳೂರು ಆಕೇಶನಲ್ಸ್ ಕ್ರೀಡಾ ಸಂಸ್ಥೆ ಮತ್ತು ಸಿ ಬರ್ಡ್ ಕ್ರಿಕೆಟ್ ಅಕಾಡಮಿ ಸಂಸ್ಥೆಗಳು ಪಣಂಬೂರಿನ ನವಮಂಗಳೂರು ಬಂದರು ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಡಿಎನ್‌ಐ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಲೀಗ್ ಹಂತದ ಪಂದ್ಯಗಳಲ್ಲಿ ಯುನೈಟೆಡ್ ಉಳ್ಳಾಲ, ಟೀಮ್ ಎಲಿಗೆಂಟ್ ತಂಡಗಳು ಜಯ ದಾಖಲಿಸಿದೆ.
ಯುನೈಟೆಡ್ ಉಲ್ಲಾಳಕ್ಕೆ 20 ರನ್‌ಗಳ ಜಯ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಯುನೈಟೆಡ್ ಉಳ್ಳಾಲ ತಂಡವು ಸಚಿನ್ ಭಟ್‌ರ ಅಜೇಯ 48, ಅಸಿಫ್ ಬಾಷಾರ 25, ಡೆಡ್ ಮಥಾಯಿಸ್‌ರ 34 ರನ್ ನೆರನಿಂದ 20 ಓವರುಗಳಲ್ಲಿ 5 ವಿಕೆಟುಗಳ ನಷ್ಟದಲ್ಲಿ 167 ಮೊತ್ತವನ್ನು ಗಳಿಸಿತು. ಓವರೊಂದಕ್ಕೆ 8.5 ರನ್ ಗಳಿಸಬೇಕಾದ ಒತ್ತಡದಿಂದ ಕಣಕ್ಕಿಳಿದ ಕ್ಲಾಸಿಕ್ ಬಂಟ್ವಾಳ ತಂಡದ ಮುಹಮ್ಮದ್ ತಾಹ, ಬಿಪಿನ್ ಮತ್ತು ಇಮ್ರಾನ್‌ರವರು ಯಾವುದೇ ರನ್ ಗಳಿಸದೆ ಮರಳಿದಾಗ ತಂಡದ ಮೊತ್ತ 5ಕ್ಕೆ 3 ಆಗಿತ್ತು. ಈ ಹಂತದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಶೇಖಾವತ್ ತಂಡವನ್ನು ಜಯದ ಸನಿಹಕ್ಕೆ ತಂದರೂ ಪ್ರಯೋಜನವಾಗಿಲ್ಲ. ಯುನೈಟೆಡ್ ತಂಡದ ಅಡ್ರಿಕ್ 23ಕ್ಕೆ 2, ಸಿನಾನ್ 31ಕ್ಕೆ 2, ನಿಶಾಂತ್ 19ಕ್ಕೆ 2 ವಿಕೆಟುಗಳನ್ನು ಪಡೆದರು. ಸಚಿನ್ ಭಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು.
ಟೀಂ ಎಲಿಗೆಂಟಿಗೆ ಕಾರ್ಕಳ ವಿರುದ್ಧ 22 ರನ್‌ಗಳ ಅಂತರದ ಜಯ
ಹೊನಲು ಬೆಳಕಿನಲ್ಲಿ ಜರಗಿದ ಟೀಂ ಎಲಿಗೆಂಟ್ ಮತ್ತು ಕಾರ್ಕಳ ಗ್ಲೇಡಿಯೇಟರ್ಸ್ ನಡುವಣ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಎಲಿಗೆಂಟ್ ಲಾಲ್ ಸಚಿನ್‌ರ ಆಕರ್ಷಕ ಅಜೇಯ 91 ಮತ್ತು ಅಸಿಫ್‌ರ 32 ರನ್‌ಗಳ ಬೀಸುಗೆಯಲ್ಲಿ ನಿಗದಿತ 20 ಓವರುಗಳಲ್ಲಿ 6 ವಿಕೆಟ್ ನಷ್ಟದಲ್ಲಿ 153 ರನ್‌ಗಳನ್ನು ಗಳಿಸಿತು. ನಿತಿನ್ ಮೂಲ್ಕಿ 28ಕ್ಕೆ 2, ಝೀಷನ್ 36ಕ್ಕೆ 2 ವಿಕೆಟುಗಳನ್ನು ಪಡೆದರು. ಕಾರ್ಕಳ ತಂಡವು 5 ವಿಕೆಟ್ ನಷ್ಟದಲ್ಲಿ 131 ರನ್‌ಗಳನ್ನು ಗಳಿಸಲು ಶಕ್ತವಾಗಿ 22 ರನ್‌ಗಳ ಅಂತರದ ಸೋಲನ್ನು ಕಂಡಿತು. ಲಾಲ್ ಸಚಿನ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದರು. ಸಂಪತ್ ಶೆಟ್ಟಿ 28ಕ್ಕೆ 2 ವಿಕೆಟ್ ಪಡೆದರು.
ಸೂಪರ್ ಓವರಿನಲ್ಲಿ ಟಿ4 ಸೂಪರ್‌ಕಿಂಗಿಗೆ ಜಯ
ರೋಮಾಂಚಕ ಅಂತ್ಯ ಕಂಡ ಮಂಗಳೂರು ಯುನೈಟೆಡ್ ಮತ್ತು ಟಿ4 ಸೂಪರ್ ಕಿಂಗ್ ತಂಡಗಳ ನಡುವಣ ಪಂದ್ಯದಲ್ಲಿ ಎರಡೂ ತಂಡಗಳು 20 ಓವರುಗಳ ಮುಕ್ತಾಯದಲ್ಲಿ 7 ವಿಕೆಟ್‌ಗಳನ್ನು ಕಳೆದು ಕೊಂಡು ತಲಾ136 ರನ್ ಗಳಿಸಿತ್ತು. ಈ ಹಂತದಲ್ಲಿ ಸೂಪರ್ ಓವರನ್ನು ಜಾರಿ ಮಾಡಿದಾಗ ಉಳ್ಳಾಲ ತಂಡವು ಆ ಓವರಿನಲ್ಲಿ 15 ರನ್ ಗಳಿಸಿದರೆ, ಟಿ4 ತಂಡದ ನೆಹಾಲ್ ಉಲ್ಲಾಳ್ ಎರಡು ಭರ್ಜರಿ ಸಿಕ್ಸರ್‌ಗಳನ್ನು ಭಾರಿಸಿ ತಂಡಕ್ಕೆ ಸೂಪರ್ ಜಯವನ್ನು ತಂದಿತ್ತರು.
ಕ್ರಾಂತಿಕುಮಾರ್ ಮಿಂಚಿನ ಶತಕ - ಅಲಿ ವಾರಿಯರ್ಸ್‌ಗೆ ಜಯ
ಅಲಿ ವಾರಿರ್ಸ್ ಮತ್ತು ವೈಸ್ ವಾರಿಯರ್ಸ್ ತಂಡಗಳ ನಡುವಣ ಪಂದ್ಯವು ಪ್ರೇಕ್ಷಕರಿಗೆ ಭರಪೂರ ಮನೋರಂಜನೆಗೆ ವೇದಿಕೆಯಾಯಿತು. ಅಲಿ ವಾರಿಯರ್ಸ್ ತಂಡದ ಕ್ರಾಂತಿ ಕುಮಾರ್ 63 ಎಸೆತದಲ್ಲಿ 16 ಬೌಂಡರಿ, 2 ಸಿಕ್ಸರ್‌ಗಳುಳ್ಳ 105 ರನ್ ಬಾರಿಸಿದರು.
ಅನುರಾಗ್ ಭಾಜ್‌ಪಾಯಿ 34, ಪ್ರಥ್ವಿರಾಜ್ 23 ರನ್ ಗಳಿಸಿದರು. ಅಲಿ ವಾರಿಯರ್ಸ್ ತಂಡವು 20 ಓವರುಗಳ ಅಂತ್ಯದಲ್ಲಿ 7 ವಿಕೇಟ್ ನಷ್ಟದಲ್ಲಿ 196 ರನ್ ಭರ್ಜರಿ ಮೊತ್ತವನ್ನು ಗಳಿಸಿತು.ವೈಸ್ ವಾರಿಯರ್ಸ್ ತಂಡವು 46 ರನ್‌ಗೆ 4 ವಿಕೆಟ್ ಕಳೆದುಕೊಂಡಿತು. ಬಳಿಕ ಈ ತಂಡವು 16ನೆಯ ಓವರಿನಲ್ಲಿ 99 ರನ್‌ಗಳಿಗೆ ಆಲೌಟ್ ಆಗಿ 97 ರನ್‌ಗಳ ಅಂತರದ ಸೋಲನ್ನು ಕಂಡಿತು.
ಶ್ರೀಲಂಕಾದ ಆಟಗಾರ ರೋಷನ್ ಡಿಸಿಲ್ವಾ ಮತ್ತು ಮಾಜಿ ಕ್ರಿಕೆಟ್ ಆಟಗಾರ ರಘುರಾಮ್ ಭಟ್ ಎಂಪಿಎಲ್ ಬಾವುಟವನ್ನು ಹೊತ್ತ ಬಲೂನ್‌ಗಳ ಗುಚ್ಛವನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಕೂಟಕ್ಕೆ ಚಾಲನೆ ನೀಡಿದರು.
ಪಂದ್ಯದ ಪ್ರಾಯೋಜಕರಾದ ಡಿಎನ್‌ಐ ಹೋಮ್ ಥಿಯೇಟರ್ ಕಂಪನಿಯ ಅಲೆಕ್ಸ್ ಲಸ್ ಅವರು ಯು.ಎಂ. ಕಂಪನಿಯು ಸರಣಿ ಶ್ರೇಷ್ಠನಿಗಾಗಿ ಕೊಡಮಾಡಿರುವ ಅಮೆರಿಕನ್ ಬೈಕನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ವೈಟ್‌ಸ್ಟೋನ್ ಸಂಸ್ಥೆಯ ಶರೀಫ್, ಇಸ್ಮಾಯೀಲ್ ಉಳ್ಳಾಲ, ದಿಜೀಶ್, ಶಾವಾಝ್, ಈಸ್ಟನ್ ಅರೇಬಿಯಾದ ಇಮ್ರಾನ್, ಅಮಾಕೋ ಕಂಪನಿಯ ಅಸಿಫ್, ಯು.ಎಂ. ರೀನಿಗೇಡ್ ಅಮೆರಿಕನ್ ಬೈಕ್ ಕಂಪನಿಯ ನೆಹಾಲ್, ಮಹಾವೀರ್, ಶಮೀರ್,ಶೇರ್ಝಾನ್, ತುಷಾರ್, ಸಫ್ವಾನ್, ಮನ್ಸೂರ್, ಪರ್ವೇಷ್, ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಮನೋಹರ್ ಅಮೀನ್, ಎ.ವಿ.ಶಶಿಧರ್, ಕೆ.ಟಿ. ಕುಮಾರ್ ಉಪಸ್ಥಿತರಿದ್ದರು.
ಪಂದ್ಯಾಟದ ರೂವಾರಿಗಳಾದ ಸಿರಾಜುದ್ದೀನ್ ಮತ್ತು ಇಮ್ತಿಯಾಝ್ ಸ್ವಾಗತಿಸಿದರು. ಬಾಲಕೃಷ್ಣ ಪರ್ಕಳ ವಂದಿಸಿದರು. ಮಧು ಕಾರ್ಯಕ್ರಮ ನಿರೂಪಿಸಿದರು.