×
Ad

ಚುನಾವಣಾ ಹಸ್ತಕ್ಷೇಪಕ್ಕಾಗಿ ಮಾಹಿತಿ ಕಳವು: ಫೇಸ್‌ಬುಕ್ ವಿರುದ್ಧ ಕ್ರಮಕ್ಕೆ ಮುಂದಾದ ಬ್ರಿಟನ್ ಸರಕಾರ

Update: 2018-03-21 21:13 IST

ಲಂಡನ್, ಮಾ. 21: ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕಾಗಿ ಸುಮಾರು 5 ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿಗಳನ್ನು ಕದಿಯಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಅಂಕಿ-ಅಂಶಗಳನ್ನು ಸಂಗ್ರಹಿಸುವ ಸಂಸ್ಥೆ ‘ಕೇಂಬ್ರಿಜ್ ಎನಾಲಿಟಿಕ’ದ ಮುಖ್ಯಸ್ಥರನ್ನು ಅಮಾನತುಗೊಳಿಸಲಾಗಿದೆ.

ಅದೇ ವೇಳೆ, ಕೇಂಬ್ರಿಜ್ ಎನಾಲಿಟಿಕ ಮತ್ತು ಫೇಸ್‌ಬುಕ್- ಈ ಎರಡು ಸಂಸ್ಥೆಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಬ್ರಿಟನ್ ಸರಕಾರ ಮುಂದಾಗಿದೆ.

 ಬ್ರಿಟನ್‌ನ ‘ಚಾನೆಲ್ 4 ನ್ಯೂಸ್’ನ ಮಫ್ತಿಯಲ್ಲಿದ್ದ ವರದಿಗಾರನೊಂದಿಗೆ ತನ್ನ ಸಂಸ್ಥೆಯ ‘ಸೇವೆ’ಗಳ ಬಗ್ಗೆ ಹೇಳಿಕೊಂಡ ಕೇಂಬ್ರಿಜ್ ಎನಾಲಿಟಿಕದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲೆಕ್ಸಾಂಡರ್ ನಿಕ್ಸ್‌ರನ್ನು ಸಂಸ್ಥೆಯ ನಿರ್ದೇಶಕರ ಮಂಡಳಿಯು ವಿಚಾರಣೆ ಕಾದಿರಿಸಿ ಅಮಾನತು ಮಾಡಿದೆ.

2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ರ ವಿಜಯದಲ್ಲಿ ತನ್ನ ಅಂಕಿ-ಅಂಶ ಸಂಗ್ರಹಣಾ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ ಎಂಬುದಾಗಿ ನಿಕ್ಸ್ ಹೇಳಿಕೊಳ್ಳುವ ದೃಶ್ಯವನ್ನು ಚಾನೆಲ್ 4 ನ್ಯೂಸ್ ಮಂಗಳವಾರ ಪ್ರಸಾರ ಮಾಡಿದೆ.

ತನ್ನ ಸಂಸ್ಥೆಯು ಎಲ್ಲ ಅಂಕಿ-ಅಂಶಗಳನ್ನು ಸಂಗ್ರಹಿಸಿದೆ, ಎಲ್ಲ ವಿಶ್ಲೇಷಣೆಗಳನ್ನು ಮಾಡಿದೆ ಹಾಗೂ ಎಲ್ಲರ ಹಿಂದೆಯೂ ಬಿದ್ದಿದೆ ಎಂದು ನಿಕ್ಸ್ ಹೇಳಿಕೊಂಡಿದ್ದಾರೆ.

 ಇಂಥ ಹಸ್ತಕ್ಷೇಪಗಳಲ್ಲಿ ತನ್ನ ಪಾತ್ರವನ್ನು ಪತ್ತೆಹಚ್ಚುವುದನ್ನು ಹೆಚ್ಚು ಕಠಿಣವಾಗಿಸಲು ‘ಸೆಲ್ಫ್ ಡಿಸ್ಟ್ರಕ್ಟರ್ ಟೈಮರ್’ ಹೊಂದಿದ ಇಮೇಲ್‌ಗಳನ್ನು ಕೇಂಬ್ರಿಜ್ ಬಳಸಿದೆ ಎಂದು ನಿಕ್ಸ್ ಹೇಳಿದ್ದಾರೆ.

‘‘ನಾವು ಮಾಹಿತಿ ಸಂಗ್ರಹಿಸಿರುವುದಕ್ಕೆ ಯಾವುದೇ ಪುರಾವೆಯಿಲ್ಲ, ಯಾವುದೇ ಪತ್ರ ದಾಖಲೆಯಿಲ್ಲ, ಏನೂ ಇಲ್ಲ’’ ಎಂದಿದ್ದಾರೆ.

ನಿಕ್ಸ್ ಹೇಳಿಕೆಗೂ ಕಂಪೆನಿಗೂ ಸಂಬಂಧವಿಲ್ಲ

 ಕೇಂಬ್ರಿಜ್ ಎನಾಲಿಟಿಕದ ಸಿಇಒ ಅಲೆಕ್ಸಾಂಡರ್ ನಿಕ್ಸ್ ಹೇಳಿಕೆಗೂ ಕಂಪೆನಿಯ ಮೌಲ್ಯಗಳು ಅಥವಾ ಕಾರ್ಯವಿಧಾನಗಳಿಗೂ ಯಾವುದೇ ಸಂಬಂಧವಿಲ್ಲ ಹಾಗೂ ಈ ಉಲ್ಲಂಘನೆಯನ್ನು ನಾವು ಎಷ್ಟು ಗಂಭೀರವಾಗಿ ಪರಿಗಣಿಸಿದ್ದೇವೆ ಎನ್ನುವುದನ್ನು ಅವರ ಅಮಾನತು ಸೂಚಿಸುತ್ತದೆ ಎಂದು ಹೇಳಿಕೆಯೊಂದರಲ್ಲಿ ಕೇಂಬ್ರಿಜ್ ನಿರ್ದೇಶಕರ ಮಂಡಳಿ ತಿಳಿಸಿದೆ.

ನಾನು ಬಲಿಪಶು: ಆ್ಯಪ್ ತಯಾರಕ

ಕೋಟ್ಯಂತರ ಫೇಸ್‌ಬುಕ್ ಬಳಕೆದಾರರ ಮಾಹಿತಿ ಸಂಗ್ರಹಿಸಲು ಕೇಂಬ್ರಿಜ್ ಎನಾಲಿಟಿಕ, ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಸಂಶೋಧಕ ಅಲೆಕ್ಸಾಂಡರ್ ಕೊಗನ್ ಅಭಿವೃದ್ಧಿ ಪಡಿಸಿದ ಆ್ಯಪನ್ನು ಬಳಸಿತ್ತು.

ಆದರೆ, ಈ ಪ್ರಕರಣದಲ್ಲಿ ತನ್ನನ್ನು ಬಲಿಪಶು ಮಾಡಲಾಗಿದೆ ಎಂಬುದಾಗಿ ಕೊಗನ್ ಬುಧವಾರ ಹೇಳಿದ್ದಾರೆ.

ತಾನು ನೀಡಿರುವ ಎಲ್ಲ ಮಾಹಿತಿಗಳನ್ನು ಕಾನೂನುಬದ್ಧವಾಗಿಯೇ ಪಡೆಯಲಾಗಿದೆ ಎಂದು ತಾನು ನಂಬಿದ್ದೇನೆ ಎಂದು ಬುಧವಾರ ಬಿಬಿಸಿಯೊಂದಿಗೆ ಮಾತನಾಡಿದ ಅವರು ಹೇಳಿದರು.

ಈ ಮಾಹಿತಿಗಾಗಿ ಕೇಂಬ್ರಿಜ್ ಎನಾಲಿಟಿಕ ತನ್ನ ಬಳಿಗೆ ಬಂದಿತ್ತು ಎಂದು ಅವರು ಹೇಳಿದ್ದಾರೆ.

ಝುಕರ್‌ಬರ್ಗ್‌ಗೆ ಬ್ರಿಟಿಶ್ ಸಂಸತ್ತಿನಿಂದ ಸಮನ್ಸ್

 ಕೋಟ್ಯಂತರ ಫೇಸ್‌ಬುಕ್ ಬಳಕೆದಾರರ ಮಾಹಿತಿಗಳನ್ನು ಜಗತ್ತಿನಾದ್ಯಂತ ಚುನಾವಣೆಗಳಲ್ಲಿ ಹಸ್ತಕ್ಷೇಪ ನಡೆಸುವುದಕ್ಕಾಗಿ ಬಳಸಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ವಿವರಣೆ ನೀಡಲು ತನ್ನೆದುರು ಹಾಜರಾಗುವಂತೆ ಬ್ರಿಟಿಶ್ ಸಂಸದೀಯ ಸಮಿತಿಯೊಂದು ಮಂಗಳವಾರ ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಝುಕರ್‌ಬರ್ಗ್‌ಗೆ ಸೂಚಿಸಿದೆ.

‘‘ಈ ಅಭೂತಪೂರ್ವ ಉಲ್ಲಂಘನೆಗಳ ಬಗ್ಗೆ ಸ್ವತಃ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿ ಹೌಸ್ ಆಫ್ ಕಾಮನ್ಸ್‌ನ ಡಿಜಿಟಲ್, ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಸ್ಥಾಯಿ ಸಮಿತಿಯ ಅಧ್ಯಕ್ಷ ಡೇಮಿಯನ್ ಕಾಲಿನ್ಸ್ ಝುಕರ್‌ಬರ್ಗ್‌ಗೆ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News