ಕೇಂಬ್ರಿಜ್ ಅನಾಲಿಟಿಕಾದೊಂದಿಗೆ ಸಂಪರ್ಕದಲ್ಲಿರುವ ಭಾರತದ ರಾಜಕೀಯ ಪಕ್ಷಗಳು ಯಾವುವು ?
ಹೊಸದಿಲ್ಲಿ, ಮಾ. 21: ಕುಖ್ಯಾತಿಗೆ ಒಳಗಾದ ರಾಜಕೀಯ ಸಮಾಲೋಚಕ ಕೇಂಬ್ರಿಜ್ ಅನಾಲಿಟಿಕಾ (ಸಿಎ)ದೊಂದಿಗೆ ಭಾರತದ ಯಾವೆಲ್ಲಾ ರಾಜಕೀಯ ಪಕ್ಷಗಳು ಸಂಪರ್ಕದಲ್ಲಿವೆ ? ಇದು ಮಿಲಿಯನ್ ಡಾಲರ್ ಪ್ರಶ್ನೆ.
ಕೇಂಬ್ರಿಜ್ ಅನಾಲಿಟಿಕಾ ಭಾರತದಲ್ಲಿ ಯಾವ ಸೇವೆ ಹಾಗೂ ಯಾರಿಗೆ ಸೇವೆ ನೀಡಿದೆ ಎಂಬುದನ್ನು ತನಿಖೆ, ವಿಚಾರಣೆ ನಡೆಸಬೇಕು ಎಂದು ಕಾಂಗ್ರೆಸ್‌ನ ಮನೀಶ್ ತೀವಾರಿ ಮಂಗಳವಾರ ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ರವಿಶಂಕರ್ ಪ್ರಸಾದ್, ಕೇಂಬ್ರಿಜ್ ಅನಾಲಿಟಿಕಾದೊಂದಿಗೆ ಕಾಂಗ್ರೆಸ್‌ಗೆ ಸಂಪರ್ಕ ಇದೆ ಎಂದು ಆರೋಪಿಸಿದ್ದಾರೆ. ಹಾಗಾದರೆ ಸತ್ಯ ಯಾವುದು ?, ಅದು ಅಸ್ಪಷ್ಟ. ಯಾಕೆಂದರೆ, ಕೇಂಬ್ರಿಜ್ ಅನಾಲಿಟಿಕಾ, ಅದರ ಮೂಲಸಂಸ್ಥೆ ಹಾಗೂ ಇತರ ಅಂಗಸಂಸ್ಥೆಗಳು ಸಂಕೀರ್ಣ ಜಾಲದಲ್ಲಿ ಒಂದಕ್ಕೊಂದು ಹೆಣೆದುಕೊಂಡಿದೆ.
2010ರ ಬಿಹಾರ ವಿಧಾನ ಸಭಾ ಚುನಾವಣೆ ಸಂದರ್ಭ ಭಾರತದ ಪಕ್ಷ ಅಥವಾ ಪಕ್ಷಗಳ ಪರವಾಗಿ ಕಾರ್ಯನಿರ್ವಹಿಸಲು ಬ್ರಿಟಿಶ್ ಮೂಲದ ಈ ಸಂಸ್ಥೆ ಅನುಮತಿ ಪಡೆಯದೆ 50 ದಶಲಕ್ಷ ಭಾರತೀಯ ಫೇಸ್‌ಬುಕ್ ಬಳಕೆದಾರರ ದತ್ತಾಂಶ ಬಳಕೆ ಮಾಡಿಕೊಂಡಿದೆ. ಇದನ್ನು ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ದೃಢಪಡಿಸಿದೆ.
ಅಚ್ಚರಿಯ ವಿಚಾರವೆಂದರೆ, ಕೇಂಬ್ರಿಜ್ ಅನಾಲಿಟಿಕಾ (ಸಿಎ)ದ ಮಾತೃ ಸಂಸ್ಥೆ ಸ್ಟ್ರೆಟೆಜಿಕ್ ಕಮ್ಯೂನಿಕೇಷನ್ ಲ್ಯಾಬೊರೇಟರಿಸ್ (ಎಸ್‌ಸಿಎಲ್). ಆದರೆ, ಆನ್‌ಲೈನ್‌ನಲ್ಲಿ ನಾವು ಎಸ್‌ಸಿಎಲ್ ಇಂಡಿಯಾ ಲಿಂಕ್ ಶೋಧಿಸಿದರೆ ಯಾವುದೇ ವೆಬ್ ಪುಟ ಕಂಡು ಬರುವುದಿಲ್ಲ. ಆದಾಗ್ಯೂ, ಒವ್ಲೆನೊ ಬ್ಯುಸಿನಸ್ ಇಂಟಲಿಜೆನ್ಸ್ (ಒಬಿಐ) ಎಂದು ಕರೆದುಕೊಳ್ಳುವ ಕಂಪೆನಿಯೊಂದು ತನ್ನ ವೆಬ್‌ಸೈಟ್‌ನಲ್ಲಿ ಇದು ಎಸ್‌ಸಿಎಲ್ ಇಂಡಿಯಾ ಎಂದು ಕರೆದುಕೊಳ್ಳುವ ಜಂಟಿ ಉದ್ಯಮದ ಒಂದು ಭಾಗ ಎಂದು ಪ್ರತಿಪಾದಿಸಿದೆ. ಇದು ತಾನು ಹಾಗೂ ಲಂಡನ್‌ನ್ ಎಸ್‌ಸಿಎಲ್ ಗುಂಪು ನಡುವಿನ ಉದ್ಯಮ ಎಂದು ಹೇಳಿದೆ. ಒಬಿಐ ತನ್ನ ವೆಬ್‌ಸೈಟ್‌ನಲ್ಲಿ ತಾನು ‘ರಾಜಕೀಯ ಅಭಿಯಾನ ನಿರ್ವಹಣೆ’ ಕಾರ್ಯ ನಿರ್ವಹಿಸುವುದಾಗಿ ಘೋಷಿಸಿಕೊಂಡಿದೆ. ಅದು ತನ್ನ ಪಟ್ಟಿಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿ (ಯು), ಐಸಿಐಸಿಐ ಬ್ಯಾಂಕ್ ಹಾಗೂ ಏರ್‌ಟೆಲ್ ಅನ್ನು ಗ್ರಾಹಕ ಎಂದು ಹೇಳಿದೆ.
ಕೇಂಬ್ರಿಜ್ ಅನಾಲಿಟಿಕಾ ಭಾರತದಲ್ಲಿ ಕೆಲಸ ಮಾಡಿದೆ ಎಂದು ಹೇಳಿಕೊಂಡಿರುವ ವೆಬ್‌ಸೈಟ್ ತನ್ನ ಸೇವೆಯನ್ನು ಯಾವ ಪಕ್ಷ ಪಡೆದುಕೊಂಡಿದೆ ಎಂದು ಹೇಳಿಲ್ಲ. ಆದರೆ, ನಿರಂತರ 15 ವರ್ಷಗಳ ಆಡಳಿತದ ಬಳಿಕವೂ ಚುನಾವಣಾ ಫಲಿತಾಂಶ ಬದಲಾಗದ ರಾಜ್ಯದಲ್ಲಿ ‘ಮತದಾರರ ನಿರಾಸಕ್ತಿ’ ಮಾಪನ ಮಾಡಿದೆ ಎಂದು ಸುಳಿವು ನೀಡಿದೆ. ಬಿಹಾರದಲ್ಲಿ 15 ವರ್ಷಗಳ ಕಾಲ ಆರ್‌ಜೆಡಿ ಆಡಳಿತ ನಡೆಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಭಾರತದ ಚುನಾವಣೆ ಸಂದರ್ಭ ಕೇಂಬ್ರಿಜ್ ಅನಾಲಿಟಿಕಾವನ್ನು ಕೆಲವರು ಸಂಪರ್ಕಿಸಿದ್ದಾರೆ ಎಂದು ಬ್ರಿಟನ್ ಚಾನೆಲ್ 4 ಟಿವಿ ನೆಟ್‌ವರ್ಕ್ ಹೇಳಿದೆ. 2016ರ ನವೆಂಬರ್‌ನಲ್ಲಿ ನಡೆದ ಅಮೆರಿಕ ಚುನಾವಣೆಯಲ್ಲಿ ಪ್ರಭಾವ ಬೀರಲು ಕೇಂಬ್ರಿಜ್ ಅನಾಲಿಟಿಕಾ ಫೇಸ್‌ಬುಕ್ ಬಳಕೆದಾರರ ದತ್ತಾಂಶ ಬಳಕೆ ಮಾಡಿಕೊಂಡಿದೆ ಎಂದು ಕೂಡ ಚಾನೆಲ್ 4 ಹೇಳಿದೆ. ಕೇಂಬ್ರಿಜ್ ಅನಾಲಿಟಿಕಾ ಹಾಗೂ ಅದರ ಪ್ರಸಕ್ತ ಕಂಪೆನಿ ಸ್ಟೆಟೆಜಿಕ್ ಕಮ್ಯೂನಿಕೇಶನ್ ಲ್ಯಾಬೊರೇಟರಿಸ್ (ಎಸ್‌ಸಿಎಲ್) ನೈಜೀರಿಯಾ, ಕೆನ್ಯಾ, ಝೆಕ್ ರಿಪಬ್ಲಿಕ್, ಅರ್ಜೆಂಟಿಯಾ ಹಾಗೂ ಭಾರತ ಸೇರಿದಂತೆ ಜಗತ್ತಿನಾದ್ಯಂತದ ನಡೆದ 200ಕ್ಕೂ ಅಧಿಕ ಚುನಾವಣೆಗಳಲ್ಲಿ ಕೆಲಸ ಮಾಡಿದೆ ಎಂದು ಚಾನೆಲ್ 4 ಬಹಿರಂಗಗೊಳಿಸಿದೆ.
ಎಸ್‌ಸಿಎಲ್ ಇಂಡಿಯಾ ಎಂದು ಕರೆಯಲಾಗುವ ಎಸ್‌ಸಿಎಲ್‌ನ ಭಾರತ ಘಟಕ ಹಾಗೂ ಎಸ್‌ಸಿಎಲ್ ಗುಂಪು, ಒಬಿಐ ನಡುವೆ ಜಂಟಿ ವ್ಯವಹಾರ ಇದೆ ಎಂದು ಈ ಹಿಂದೆ ಒಬಿಐ ತಿಳಿಸಿತ್ತು. ಎಸ್‌ಸಿಎಲ್‌ನ ಜಾಲತಾಣದಲ್ಲಿ ಎಸ್‌ಸಿಎಲ್ ಅನ್ನು ಒಬಿಐಯ ‘ರಾಜಕೀಯ ಅಭಿಯಾನ ನಿರ್ವಹಣಾ’ ಕಾರ್ಯ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ಜಾಲತಾಣದ ಪೇಜ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಪ್‌ನ ವರಿಷ್ಠ ಕೇಜ್ರಿವಾಲ್ ಅವರ ಭಾವಚಿತ್ರ ಹಾಗೂ ಗ್ರಾಹಕರ ಪಟ್ಟಿ ಹಾಕಲಾಗಿದೆ.