×
Ad

ಜಲಾಂತರ್ಗಾಮಿ ಐಎನ್‌ಎಸ್ ಅರಿಹಂತ್‌ಗೆ ಹಾನಿ: ಮಾಹಿತಿ ನೀಡಲು ಸಾಧ್ಯವಿಲ್ಲ ಎಂದ ಸರಕಾರ

Update: 2018-03-21 22:13 IST

ಹೊಸದಿಲ್ಲಿ, ಮಾ.21: ಭಾರತವು ದೇಶೀಯವಾಗಿ ನಿರ್ಮಿಸಿರುವ ಪರಮಾಣು ಚಾಲಿತ ಬಾಲಿಸ್ಟಿಕ್ ಜಲಾಂತರ್ಗಾಮಿ ಐಎನ್‌ಎಸ್ ಅರಿಹಂತ್ ಕಳೆದ ವರ್ಷ ನಡೆದ ಅಪಘಾತದಲ್ಲಿ ಹಾನಿಗೀಡಾಗಿದೆಯೇ ಎಂದು ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ರಕ್ಷಣಾ ಸಚಿವಾಲಯವು, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಈ ಬಗ್ಗೆ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಉತ್ತರಿಸಿದೆ.

ಐಎನ್‌ಎಸ್ ಅರಿಹಂತ್‌ಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ನೀಡಬೇಕು. ಸ್ವದೇಶಿ ನಿರ್ಮಿತ ಜಲಾಂತರ್ಗಮಿಯು ಕೆಲವು ತಿಂಗಳುಗಳಿಂದ ಕಾರ್ಯಾಚರಿಸುತ್ತಿಲ್ಲ ಎಂಬ ಮಾಹಿತಿಯಿದೆ ಆ ಬಗ್ಗೆಯೂ ವಿವರಣೆ ನೀಡಬೇಕು ಎಂದು ವೈಎಸ್‌ಆರ್ ಕಾಂಗ್ರೆಸ್‌ನ ಸಂಸದ ಪಿ.ವಿ ಮಿಧುನ್ ರೆಡ್ಡಿ ಸರಕಾರವನ್ನು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಕ್ಷಣಾ ರಾಜ್ಯ ಸಚಿವ ಸುಭಾಷ್ ಭಾಮ್ರೆ, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಈ ಕುರಿತ ಮಾಹಿತಿಯನ್ನು ಸದನದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 2017ರಲ್ಲಿ ಐಎನ್‌ಎಸ್ ಅರಿಹಂತ್‌ನ ಪ್ರೊಪಲ್ಶನ್ ವಿಭಾಗದೊಳಗೆ ನೀರು ಹರಿದು ಜಲಾಂತರ್ಗಮಿಗೆ ತೀವ್ರ ಹಾನಿಯಾಗಿತ್ತು. ಈ ಅಪಘಾತವು ಮಾನವ ಲೋಪದಿಂದ ನಡೆದಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಐಎನ್‌ಎಸ್ ಅರಿಹಂತ್ ಜಲಾಂತರ್ಗಮಿಯನ್ನು 2009ರಲ್ಲಿ ಅಂದಿನ ಪ್ರಧಾನಿ ಡಾ. ಮನ್‌ಮೋಹನ್ ಸಿಂಗ್ ಪರೀಕ್ಷಾರ್ಥ ಚಾಲನೆ ನೀಡಿದ್ದರು. ನಂತರ 2016ರಲ್ಲಿ ದೇಶೀಯ ನಿರ್ಮಿತ ಜಲಾಂತರ್ಗಮಿಯನ್ನು ಭಾರತೀಯ ನೌಕಾಪಡೆಗೆ ಸೇರಿಸಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News