ಕುಡಿಯುವ ನೀರಿಗಾಗಿ ಬಜೆ ಪಂಪಿಂಗ್ ಸ್ಟೇಶನ್‌ಗೆ ನಿರಂತರ ವಿದ್ಯುತ್: ಅಧಿಕಾರಿಗಳಿಗೆ ಸಚಿವರ ಸೂಚನೆ
ಉಡುಪಿ, ಮಾ.21: ಉಡುಪಿ ನಗರಸಭೆಗೆ ಕುಡಿಯುವ ನೀರು ಸರಬರಾಜು ಮಾಡುವ ಬಜೆಯ ಪಂಪಿಂಗ್ ಸ್ಟೇಶನ್‌ಗೆ ದಿನದ 24 ಗಂಟೆಯೂ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಮೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್, ತಪ್ಪಿದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಮೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಸಭೆಯಲ್ಲಿ ಭಾಗವಹಿಸುವಂತೆ ತಿಳಿಸಿದ್ದರೂ ಗೈರುಹಾಜರಾಗಿ ಸಹಾಯಕ ಇಂಜಿನಿಯರ್‌ರನ್ನು ಕಳುಹಿಸಿದ ಕೆಪಿಸಿಟಿಎಲ್‌ನ ಕಾರ್ಯನಿರ್ವಾಹಕ ಇಂಜಿನಿಯರ್‌ನ್ನು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಮರ್ಪಕವಾಗಿ ಕೆಲಸ ಮಾಡದೇ ಜನರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಜೆ ಪಂಪಿಂಗ್ ಸ್ಟೇಶನ್‌ಗೆ ಮೂರು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ವಾದರೆ ಉಡುಪಿ ನಗರಕ್ಕೆ 3-4 ದಿನ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ. ಮಣಿಪಾಲ-ಬಜೆಯ ನಡುವೆ ಎಕ್ಸ್‌ಪ್ರೆಸ್ ಕಾರಿಡಾರ್ ಇದೆ. ಅದನ್ನು ಬಳಸಿ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುವಂತೆ ಸಂಬಂಧಿತ ಇಂಜಿನಿಯರ್‌ಗಳಿಗೆ ಅವರು ಸೂಚಿಸಿದರು. ಒಂದು ಲೈನ್‌ನಲ್ಲಿ ತೊಂದರೆ ಕಾಣಿಸಿಕೊಂಡರೆ ಮತ್ತೊಂದು ಲೈನ್‌ನ್ನು ಬಳಸಿ ವಿದ್ಯುತ್ ನೀಡುವಂತೆ ಸೂಚಿಸಿದರು. ಸಭೆಯಲ್ಲಿ ಸಚಿವರು ಕೆಪಿಟಿಸಿಎಲ್ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನಗರಸಭೆ, ಕೆಪಿಟಿಸಿಎಲ್ ಹಾಗೂ ಮೆಸ್ಕಾಂಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಹಿರಿಯಡ್ಕ ಮತ್ತು ಬಜೆ ನಡುವೆ ಭೂಗತ ಕೇಬಲ್ ಅಳವಡಿಸಲು ಅಂದಾಜು ಪಟ್ಟಿಯನ್ನು ತಯಾರಿಸುವಂತೆ ತಿಳಿಸಿದ ಸಚಿವರು, ನಗರಸಭೆ ತನ್ನ ಅನುದಾನದಿಂದ ಇದಕ್ಕೆ ನೆರವು ನೀಡುವಂತೆ ತಿಳಿಸಿದರು. ಉಡುಪಿಗೆ 24 ಗಂಟೆಯೂ ವಿದ್ಯುತ್ ನೀಡುವಂತೆ ತಿಳಿಸಿದ ಪ್ರಮೋದ್, ವಾರಾಹಿ-ಯುಪಿಸಿಎಲ್‌ನಲ್ಲಿ ಸಮಸ್ಯೆ ಇದ್ದರೆ ಮಾತ್ರ ವಿದ್ಯುತ್ ವ್ಯತ್ಯಯ ವಾಗುತಿದೆ ಎಂದರು.
ಸಭೆಯಲ್ಲಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಪೌರಾಯುಕ್ತ ಡಿ.ಮಂಜುನಾಥಯ್ಯ ಹಾಗೂ ಮೆಸ್ಕಾಂನ ಅಧೀಕ್ಷಕ ಶರತ್‌ಚಂದ್ರ ಉಪಸ್ಥಿತರಿದ್ದರು.