×
Ad

ಭಟ್ಕಳ: ತ್ರಿವಳಿ ತಲಾಖ್ ಕಾಯ್ದೆ ವಿರುದ್ಧ ಮಹಿಳೆಯರ ಪ್ರತಿಭಟನೆ

Update: 2018-03-21 23:34 IST

ಭಟ್ಕಳ, ಮಾ. 21: ಲೋಕಸಭೆಯಲ್ಲಿ ಮಂಡನೆಯಾಗಿರುವ ತ್ರಿವಳಿ ತಲಾಖ್ ಕಾನೂನು ವಿರುದ್ಧ ಭಟ್ಕಳದ ಸಾವಿರಾರು ಮುಸ್ಲಿಮ್ ಮಹಿಳೆಯರು ಬುಧವಾರ ಪ್ರತಿಭಟನೆ ನಡೆಸಿ, ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಬೆಂಗಳೂರು ಇದರ ಸಂಯೋಜಕಿ ಡಾ.ಆಸೀಫಾ ನಿಸಾರ್, ಸರ್ಕಾರ ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಮೂಗು ತೂರಿಸುತ್ತಿರುವುದು ಸರಿಯಲ್ಲ. ನಮಗೆ ನಮ್ಮ ಷರಿಯತ್ ಕಾನೂನಿನಲ್ಲಿ ರಕ್ಷಣೆಯಿದೆ. ಸಂವಿಧಾನಕ್ಕೆ ವಿರೋಧವಾಗಿರುವ ಇಂತಹ ಕಾಯ್ದೆಯಿಂದ ಮುಸ್ಲಿಮ್ ಮಹಿಳೆಯರಿಗೆ ಯಾವುದೇ ಲಾಭವಾಗದೆ ತೊಂದರೆಗಳೆ ಹೆಚ್ಚಾಗುತ್ತಿದ್ದು ಕೂಡಲೇ ಈ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಅವರು ಆಗ್ರಹಿಸಿದರು.

ಪ್ರಸ್ತುತ ಬಿಲ್ ನ್ನು ಲೋಕಸಭೆಯಲ್ಲಿ ಮಂಡನೆ ಮಾಡುವ ಮೊದಲೆ ಯಾವುದೇ ಮುಸ್ಲಿಮ್ ವಿದ್ವಾಂಸರೊಂದಿಗೆ ಚರ್ಚಿಸದೆ ಮನಸೋ ಇಚ್ಚೆ ಕಾಯ್ದೆ ರೂಪಿಸಲಾಗಿದೆ ದೇಶದ ಉಚ್ಚ ನ್ಯಾಯಾಲಯವು ಈ ಕಾಯ್ದೆಯ ಅವಶ್ಯಕತೆಯಿಲ್ಲ ಎಂಬ ನಿರ್ಣಯವನ್ನು ನೀಡಿದ್ದರೂ ಇದನ್ನು ಲೋಕಸಭೆಯಲ್ಲಿ ಮಂಡನೆ ಮಾಡಿರುವುದು ಸಂವಿಧಾನ ಬಾಹಿರವಾಗಿದೆ ಇದು ಮಹಿಳಾ ಹಾಗೂ ಮಕ್ಕಳ ವಿರೋಧ್ದ ರೂಪಿಸಲಾಗಿರುವ ಕಾಯ್ದೆಯಾಗಿದೆ, ಸಮಾಜ ವಿರೋಧಿ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಅಲ್ಲದೆ ಜಂಟಿ ಅಧಿವೇಶನದಲ್ಲಿ ಮಾನ್ಯ ರಾಷ್ಟ್ರಪತಿಗಳು ನೀಡಿದ ಹೇಳಿಕೆಯಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಮಾತ್ರವಲ್ಲ ಈ ದೇಶದ ಜನತೆಗೆ ಅವಮಾನ ಮಾಡಿದಂತಾಗಿದ್ದು ಅವರ ಹೇಳಿಕೆಯನ್ನು ಅಳಿಸಬೇಕೆಂದೂ ಮನವಿಯಲ್ಲಿ ಆಗ್ರಹಿಸಲಾಗಿದೆ. ಮುಸ್ಲಿಮರ ಭಾವನೆಗಳೊಂದಿಗೆ ಕೇಂದ್ರ ಸರ್ಕಾರ ಆಟ ಆಡುತ್ತಿದ್ದು ಯಾವುದೇ ರೀತಿಯ ಧಕ್ಕೆ ಬಾರದಂತೆ ಮುಂದಿನ ದಿನಗಳಲ್ಲಿ ನಡೆದುಕೊಳ್ಳಬೇಕೆಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯೆ ತಸ್ನೀಮ್ ಶಾಹಜಹಾನ್ ಈ ಸಂದರ್ಭದಲ್ಲಿ ಮಾತನಾಡಿದರು. ಝರೀನಾ ಕೋಲಾ ಮನವಿ ಪತ್ರವನ್ನು ಓದಿದರು.

ವೇದಿಕೆಯಲ್ಲಿ ಝೀನತ್ ರುಕ್ನುದ್ದೀನ್, ನಸೀಮಾ, ಫರ್ಹತ್, ಗುಲ್ ಅಫ್ರೋರ್, ಸಬಿಹಾ ಫಾರೂಖ್, ನಾಝಿಮಾ, ತಬಸ್ಸುಮ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News