ಇರುವ ರಸ್ತೆ ಅಗೆದು ಉಡುಪಿಗೆ ನೀರು ತರುವ ಜಾಣರು!

Update: 2018-03-22 04:56 GMT

ನಮ್ಮ ಪ್ರತಿನಿಧಿಯಿಂದ

ಭರತ್ಕಲ್‌ನಿಂದ ಉಡುಪಿಯ ಬಜೆಗೆ ನೀರಿನ ಪೈಪ್ ಲೈನ್ ಬರುವ ಹಾದಿಯದ್ದೇ ಇನ್ನೊಂದು ಮಹಾ ಹಗರಣ. ಸಾಮಾನ್ಯವಾಗಿ ಹೀಗೆ ಪೈಪ್ ಲೈನ್ ತರುವಾಗ ಅದಕ್ಕೆಂದು ಹಾದಿಯಲ್ಲಿನ ಖಾಸಗಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಬರುವುದು ಕ್ರಮ. ಆದರೆ ಈ ಯೋಜನೆಗೆ ಅಧಿಕಾರಿ ಗಳು ವಿಚಿತ್ರವಾದ ಹಾದಿಯೊಂದನ್ನು ತೆರೆದಿದ್ದಾರೆ.

ಭರತ್ಕಲ್‌ನಿಂದ ಉಡುಪಿಯ ತನಕ ಸಾಟಲೈಟ್ ಮೂಲಕ ನೇರ ರೇಖೆಯಲ್ಲಿ ಪೈಪ್ ಲೈನ್ ಎಳೆದರೂ ದೂರ ಗಮನಾರ್ಹವಾಗಿ ಕಡಿಮೆ ಆಗುತ್ತದೆ. ಅದಕ್ಕೆ ಬದಲಾಗಿ, ಅಡ್ಡಾದಿಡ್ಡಿ ಹೋಗುವ ಸರಕಾರಿ ರಸ್ತೆಯನ್ನು ಅಗೆದು, ಅದರ ಅಡಿಯಲ್ಲೇ ರಸ್ತೆಯುದ್ದಕ್ಕೂ ಮೀಟರುಗಟ್ಟಲೆ ಆಳ-ಅಗಲದ ಕಂದಕ ತೆಗೆದು, ಆ ಕಂದಕದಲ್ಲಿ ಪೈಪ್ ಲೈನ್ ತರುವ ಮತ್ತು ಅದರ ಮೇಲೆ ಹೊಸದಾಗಿ ರಸ್ತೆ ನಿರ್ಮಿಸುವ ಯೋಜನೆ ಇದು! ಹೀಗೆ ಮಾಡಿದರೆ ಸರಕಾರದ ದುಡ್ಡು ಉಳಿಯುತ್ತದೆ ಎಂಬ ಸಬೂಬು ಬೇರೆ.

 ಈಗಾಗಲೇ 38 ಕಿ.ಮೀ.ನಷ್ಟು ಇರುವ ಗ್ರಾಮೀಣ ರಸ್ತೆಯನ್ನು ಅಗೆದು ಪೈಪ್ ಲೈನಿಗೆ ಕಂದಕ ತೆಗೆಯುವ ಮೂಲಕ ರಾಷ್ಟ್ರೀಯ ಸಂಪತ್ತಿನ ನಷ್ಟ ಒಂದೆಡೆಯಾದರೆ, ಇನ್ನೊಂದೆಡೆ ಆ ರಸ್ತೆಗಳನ್ನು ಹೊಸದಾಗಿ ನಿರ್ಮಿಸುವ ಖರ್ಚು. ಇನ್ನು ಪೈಪ್ ಲೈನಿನ ನಿರ್ವಹಣೆಗೆಂದು ಆಗಾಗ ರಸ್ತೆಯನ್ನು ಅಗೆಯುವ ಕಾಮಗಾರಿಯ ಲಾಭವೂ ಜೀವನಪೂರ್ತಿ ಇರುತ್ತದೆ!

ಈ ರೀತಿ ಹಾದು ಹೋಗುವ ಕಾಮಗಾರಿಗಳಲ್ಲಿ ರಸ್ತೆಯ ಸಾಧಾರಣ ಗುಣಮಟ್ಟದ ಕಾರಣದಿಂದಾಗಿ ಮಣ್ಣು ಕುಸಿದು ರಸ್ತೆ ಹದಗೆಡುವ ಅಪಾಯ ಕಟ್ಟಿಟ್ಟಬುತ್ತಿ. ಜೊತೆಗೇ, ಇಂತಹ ರಸ್ತೆಗಳಿಗೆ ವಿಸ್ತರಣೆಯ ಅವಕಾಶಗಳೂ ಶಾಶ್ವತವಾಗಿ ಇಲ್ಲದಾಗುತ್ತವೆ. ಹಾಗಾಗಿ ಇದು ತೀರಾ ಕೆಟ್ಟ ಸಂಪ್ರದಾಯ ವೊಂದನ್ನು ಹಾಕಿಕೊಟ್ಟಂತೆ ಎಂದು ಗ್ರಾಮಗಳ ಜನತೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿ ದ್ದಾರಲ್ಲದೇ ಇಂತಹ ದೊಂದು ಹುನ್ನಾರದ ವಿರುದ್ಧ ಹೋರಾಟಕ್ಕೂ ಸಜ್ಜಾಗುತ್ತಿದ್ದಾರೆ.

 ಸದ್ಯಕ್ಕೆ ಬೇಸಗೆಯಲ್ಲಿ ಉಡುಪಿಗೆ ನಾಲ್ಕು ತಿಂಗಳ ಕಾಲ ನೀರು ಸರಬರಾಜು ಮಾಡುವ ಯೋಜನೆ ಇದೆಂದು ಹೇಳಲಾಗುತ್ತಿದ್ದರೂ, ಯೋಜನೆಗೆಂದು ಖರೀದಿ ಮಾಡಿರುವ ಜಾಕ್ ವೆಲ್ ಪಂಪಿನ ಸಾಮರ್ಥ್ಯ, ಪೈಪ್ ಲೈನ್ ಗಾತ್ರ ಇವೆಲ್ಲ ಬೇರೆಯದೇ ಕಥೆಯನ್ನು ಹೇಳುತ್ತಿವೆ. ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರಕಾರಿ ಅಧಿಕಾರಿಗಳು ಮತ್ತು ಖಾಸಗಿ ವಿದ್ಯುತ್ ಉತ್ಪಾದಕರು-ಗುತ್ತಿಗೆದಾರರ ಲಾಬಿ ಮೂಲಕ ನಡೆಸಲಾಗುತ್ತಿರುವ ಈ ರೀತಿಯ ಕಾಮಗಾರಿಗಳನ್ನು ಕಾನೂನುಬದ್ಧವಾಗಿ ನ್ಯಾಯಾಲಯ ದಲ್ಲಿ ಮತ್ತು ಸಾಮಾಜಿಕವಾಗಿ ಪ್ರತಿಭಟನೆಗಳ ಮೂಲಕವೂ ವಿರೋಧಿಸಲು ವಾರಾಹಿ ಅಚ್ಚುಕಟ್ಟು ಪ್ರದೇಶದ ರೈತರು ಸನ್ನದ್ಧರಾಗುತ್ತಿದ್ದಾರೆ.

 ಭರತ್ಕಲ್‌ನಲ್ಲಿಯೇ ನೀರು ತೆಗೆಯಬೇಕೆಂದು ಹಠವಿದ್ದರೆ, ಅಲ್ಲಿ ನೈಸರ್ಗಿಕ ಹರಿವಿನಲ್ಲೇ ನೀರನ್ನು ಶುದ್ಧಿ ಮಾಡುವುದು ಸಾಧ್ಯವಿದೆ. ಆ ಜಾಗದಲ್ಲಿ ಲಿಫ್ಟ್ ಮಾಡಿ ಶುದ್ಧೀಕರಿಸಬೇಕಾದ ಅಗತ್ಯವಿಲ್ಲ. ಅದರಿಂದಾಗಿ ಶುದ್ಧೀಕರಣದ ಪ್ರಕ್ರಿಯೆಗೆ ತಗಲುವ ವೆಚ್ಚವೂ ಉಳಿತಾಯವಾಗುತ್ತದೆ. ಆದರೆ ಅಧಿಕಾರಿಗಳ ಉದ್ದೇಶವೇ ತಮಗೆ ಬೇಕಾದವರ ಹಿತಾಸಕ್ತಿಗಳನ್ನು ಕಾಪಾಡುವುದೇ ಆಗಿರುವುದರಿಂದ ಈ ಕಡೆಗೆ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಪರಿಣತರೊಬ್ಬರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News