ಯೆನೆಪೊಯ: 'ಮಂಗಳೂರು ಪಿಡಿಕಾನ್ ಮತ್ತು ಎಂ.ಆರ್. ಶೆಣೈ ಉಪನ್ಯಾಸ' ಕಾರ್ಯಕ್ರಮ
ಕೊಣಾಜೆ, ಮಾ. 24: ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಹಾಗೂ ವೈದ್ಯಕೀಯ ಕಾನೂನು ಸಂಬಂಧಿ ವಿಷಯಗಳ ಬಗ್ಗೆ ಪ್ರಸಕ್ತ ಅನುಸರಿಸಿರುವ ಕ್ರಮಗಳ ಬಗ್ಗೆ ಮಕ್ಕಳ ತಜ್ಞರಿಗೆ ಹೆಚ್ಚಿನ ಜ್ಞಾನ ಅಗತ್ಯವಿದ್ದು ಕಾರ್ಯಗಾರಗಳಲ್ಲಿ ಬಹಳಷ್ಟು ತಜ್ಞರು ಪಾಲ್ಗೊಳ್ಳುವುದರಿಂದ ಅವರು ನೀಡುವ ಮಾಹಿತಿ ಸಂಶೋಧನಾ ಪ್ರಗತಿ ವಿಚಾರಗಳು ಹಾಗೂ ತರಬೇತಿಯಿಂದ ವಿದ್ಯಾರ್ಥಿಗಳಲ್ಲಿ ಜ್ಞಾನ ಹಾಗೂ ಕೌಶಲ್ಯ ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್-2018ರ ಸಾಲಿನ ರಾಷ್ಟ್ರೀಯ ಅಧ್ಯಕ್ಷ, ಮಂಗಳೂರಿನ ಖ್ಯಾತ ಮಕ್ಕಳ ತಜ್ಞ ಡಾ. ಸಂತೋಷ್ ಟಿ. ಸೋನ್ಸ್ ಅಭಿಪ್ರಾಯಪಟ್ಟರು.
ಅವರು ಯೆನೆಪೊಯ ಮೆಡಿಕಲ್ ಕಾಲೇಜಿನಲ್ಲಿ ಇಂಡಿಯನ್ ಮೆಡಿಕಲ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ವಾರ್ಷಿಕ ರಾಜ್ಯ ಸಮ್ಮೇಳನದ ಅಂಗವಾಗಿ ಯೆನೆಪೊಯ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗದ ಅಶ್ರಯದಲ್ಲಿ ಶನಿವಾರ ನಡೆದ "ಮಂಗಳೂರು ಪಿಡಿಕಾನ್ ಮತ್ತು ಎಂ.ಆರ್. ಶೆಣೈ ಉಪನ್ಯಾಸ’-2018ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಅತ್ಯಗತ್ಯವಾಗಿ ಬೇಕಾಗಿದ್ದು ಅದಕ್ಕಾಗಿ ಕಾಲೇಜುಗಳಲ್ಲಿರುವ ಗ್ರಂಥಾಲಯದ ಒಳಹೊಕ್ಕು ತಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಜರ್ನಲ್‌ಗಳ ಅಧ್ಯಯನದತ್ತ ಗಮನ ಹರಿಸಬೇಕು. ಬಹಳಷ್ಟು ಸಂಖ್ಯೆಯಲ್ಲಿ ತಜ್ಞರು ತಾವು ಅಧ್ಯಯನ ಮಾಡಿರುವ ವಿಷಯಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು ಅದು ಧೂಳು ಹಿಡಿಯುವಂತಾಗಬಾರದು. ಕಂಪ್ಯೂಟರ್ ಪ್ರತಿಗೆ ಮಾತ್ರವೇ ಮೊರೆ ಹೋಗುವಂತಾಗಬಾರದು. ವೈದ್ಯಕೀಯ ವಿದ್ಯಾರ್ಥಿಗಳು ಸಾಧ್ಯವಾದಷ್ಟು ವೈದ್ಯಕೀಯ ಲೇಖನಗಳು, ಗ್ರಂಥಗಳ ಅಧ್ಯಯನ ಮಾಡುತ್ತಾ ಸದ್ಬಳಕೆ ಮಾಡಬೇಕು ಎಂದು ಹೇಳಿದರು.
ಹಾಗೆಯೇ ಪ್ರತಿ ಘಟಕವು ಕನಿಷ್ಟ ಒಂದು ಕಾರ್ಯಗಾರ ಅಯೋಜಿಸುವುದರಿಂದ ಬಹಳಷ್ಟು ಪ್ರಯೋಜನವಾಗುತ್ತದೆ. ಜಿಲ್ಲೆಯಲ್ಲಿರುವ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಮಕ್ಕಳ ವಿಭಾದಲ್ಲಿ ಕಲಿಯುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಆ ವಿಭಾಗಕ್ಕೆ ಬಹಳಷ್ಟು ಬೇಡಿಕೆ ಇದೆ ಎಂದರು.
ಯೆನೆಪೊಯ ಮೆಡಿಕಲ್ ಕಾಲೇಜಿನ ಡೀನ್ ಡಾ. ಗುಲಾಂ ಜೀಲಾನಿ ಖಾದಿರಿ ಕಾರ್ಯಗಾರ ಉದ್ಘಾಟಿಸಿದರು. ಕಾರ್ಯಗಾರದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ರಾಷ್ಟ್ರ, ಕರ್ನಾಟಕ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಇಂಡಿಯನ್ ಪಿಡಿಯಾಟ್ರಿಕ್ಸ್‌ನ 2018ರ ಸಾಲಿನ ರಾಷ್ಟ್ರೀಯ ಅಧ್ಯಕ್ಷರಾಗಿ ಜವಬ್ದಾರಿ ವಹಿಸಿಕೊಂಡ ಮಕ್ಕಳ ತಜ್ಞ ಡಾ. ಸಂತೋಷ್ ಟಿ. ಸೋನ್ಸ್ ಅವರನ್ನು ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್‌ನ ಜಿಲ್ಲಾ ಶಾಖೆಯಿಂದ ಸನ್ಮಾನಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 200ಕ್ಕೂ ಮಇಕ್ಕಿ ಮಕ್ಕಳ ತಜ್ಞರು ಕಾರ್ಯಗಾರದಲ್ಲಿ ಭಾಗವಹಿಸಿದ್ದು 20 ಮಂದಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್‌ನ ಮಾಜಿ ಕಾರ್ಯದರ್ಶಿ ಡಾ. ರೆಮೇಶ್ ಕುಮಾರ್, ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್-2018 ಜಿಲ್ಲಾ ಅಧ್ಯಕ್ಷ ಡಾ. ಕಿರಣ್ ಬಾಳಿಗಾ, ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್-2018 ರಾಜ್ಯ ಅಧ್ಯಕ್ಷ ಡಾ. ರವೀಂದ್ರ ಜೋಶಿ, ರಾಜ್ಯ ಕಾರ್ಯದರ್ಶಿ ಡಾ. ವಿಜಯ್ ಕುಲಕರ್ಣಿ, ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್‌ನ ಜಿಲ್ಲಾ ಕಾರ್ಯದರ್ಶಿ ಡಾ. ಅಬ್ದುಲ್ ಬಾಶಿತ್, ಡಾ. ಆನಂದ ಬಂಗೇರ ಹಾಗೂ ಫಾ. ಮುಲ್ಲರ್ ವೈದ್ಯಕೀಯ ಕಾಲೇಜಿನ ಸಿಎಂಎಸ್ ಡಾ. ಸಂಜೀವ ರೈ ಉಪಸ್ಥಿತರಿದ್ದರು.
ಮಂಗಳೂರು ಪೆಡಿಕಾನ್-2018 ಸಂಘಟನಾ ಅಧ್ಯಕ್ಷ, ಯೆನೆಪೊಯ ವೈದ್ಯಕೀಯ ಕಾಲೇಜಿನ ಪಿಡಿಯಾಟ್ರಿಕ್ಸ್ ವಿಭಾಗ ಮುಖ್ಯಸ್ಥ ಡಾ. ಪ್ರಕಾಶ್ ಸಲ್ದಾನ ಸ್ವಾಗತಿಸಿದರು. ರೋಶನ್ ಟೆಲ್ಲಿಸ್ ಕಾರ್ಯಕ್ರಮ ನಿರೂಪಿಸಿದರು. ಡಾ. ಸಹನಾ ಕೆ.ಎಸ್. ವಂದಿಸಿದರು.