ಕಾನೂನು ವಿದ್ಯಾಲಯಗಳು ಕಾರ್ಪೋರೇಟ್ ಕಂಪೆನಿಗಳ ರೀತಿಯಲ್ಲಿ ಮಾರ್ಪಾಡುಗೊಳ್ಳುತ್ತಿವೆ-ಕೆ.ಎಂ. ನಟರಾಜ್
ಪುತ್ತೂರು, ಮಾ. 24: ಕಾನೂನು ವಿದ್ಯಾಯಲಯಗಳು ಎಲ್ಲಾ ವರ್ಗದವರಿಗೂ ಕಾನೂನಿನ ಶಿಕ್ಷಣವನ್ನು ನೀಡುವ ಮತ್ತು ಸಮಾಜಕ್ಕೆ ಉತ್ತಮ ನ್ಯಾಯವಾದಿ ಗಳನ್ನು ಮತ್ತು ನ್ಯಾಯಾಧೀಶರನ್ನು ನೀಡುವ ಘನ ಉದ್ದೇಶದಿಂದ ಆರಂಭಗೊಂಡಿದ್ದರೂ, ಇಂದು ಕಾನೂನು ವಿದ್ಯಾಲಯಗಳು ಕೂಡಾ ಕಾರ್ಪೋರೇಟ್ ಕಂಪೆನಿಗಳ ರೀತಿಯಲ್ಲಿ ಮಾರ್ಪಾಡುಗೊಳ್ಳುತ್ತಿವೆ. ಕಾನೂನು ವಿದ್ಯಾಲಯಗಳು ಯಾವುದೇ ಸಂದರ್ಭದಲ್ಲೂ ತಮ್ಮ ಆರಂಭದ ಉದ್ದೇಶಗಳನ್ನು ಮರೆಯ ಬಾರದು ಎಂದು ದಕ್ಷಿಣ ವಲಯ ಅಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಕೆ.ಎಂ. ನಟರಾಜ್ ಹೇಳಿದರು.
ಅವರು ಶನಿವಾರ ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿಸ್ತತ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿ ದರು. 30 ವರ್ಷಗಳ ಹಿಂದೆ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಕಾನೂನು ವಿದ್ಯಾಲಯಗಳು ಇದ್ದವು. ಗ್ರಾಮೀಣ ವಿದ್ಯಾರ್ಥಿಗಳಿಗೂ ಕಾನೂನು ಶಿಕ್ಷಣ ಪಡೆಯುವ ಉದ್ದೇಶದಿಂದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರವರ್ತನೆಯಲ್ಲಿ ಆರಂಭವಾದ ವಿವೇಕಾನಂದ ಕಾಲೇಜು ಇಂದಿಗೂ ಕೂಡಾ ತನ್ನ ಸ್ಥಾಪನೆಯ ಉದ್ದೇಶವನ್ನು ಪಾಲಿಸಿಕೊಂಡು ಬರುತ್ತಿರುವ ಮೂಲಕ ಮಾದರಿ ಸಂಸ್ಥೆಯಾಗಿ ಗೌರವಿಸಲ್ಪಡುತ್ತಿದೆ ಎಂದರು.
ರಾಮನಗರ ಜಿಲ್ಲಾ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ. ಗೋಪಾಲಕೃಷ್ಣ ರೈ ಮಾತನಾಡಿ, ಈ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಯಾಗಿ ನಾನು ಇಂದಿಗೂ ಕೂಡಾ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದೇನೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯಾಗಿದ್ದ ನನಗೆ ಈ ಕಾನೂನು ವಿದ್ಯಾಲಯ ಉತ್ತಮ ಶಿಕ್ಷಣ ನೀಡಿದೆ. ಇಲ್ಲಿನ ಶಿಕ್ಷಣ ಪಡೆದು ನಾನು ಇಂದು ಜಿಲ್ಲಾ ನ್ಯಾಯಾಧೀಶನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಲು ಸಂತಸವಾಗುತ್ತಿದೆ. ಈ ಸಂಸ್ಥೆಯಲ್ಲಿ ಪಡೆದುಕೊಂಡ ಶಿಕ್ಷಣದಿಂದ ನನಗೆ ಈ ಅವಕಾಶ ದೊರೆತಿದೆ ಎಂದು ಅಭಿಮಾನಪೂರ್ವಕವಾಗಿ ಹೇಳುತ್ತಿದ್ದೇನೆ ಎಂದರು.
ರಾಜ್ಯ ಅಧಿವ್ಯಕ್ತಾ ಪರಿಷತ್‌ನ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎ.ಎಂ. ಸೂರ್ಯಪ್ರಕಾಶ್ ಮಾತನಾಡಿ, ಹಣ ಗಳಿಕೆಯೇ ವಕೀಲ ವೃತ್ತಿಯ ಉದ್ದೇಶವಾಗಬಾರದು. ಸಮಾಜಕ್ಕೆ ಉಪಕರಿಸುವ ಮನೋಭಾವದೊಂದಿಗೆ ವೃತ್ತಿ ಧರ್ಮವನ್ನು ಪಾಲಿಸುವ ಮೂಲಕ ಜನರಿಗೆ ಹತ್ತಿರವಾಗಬೇಕು. ಈ ಮೂಲಕ ಸಮಾಜದ ಒಂದು ಭಾಗವಾಗಿ ವಕೀಲರು ಗುರುತಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ವೈದ್ಯಕೀಯ, ಇಂಜಿನಿಯರಿಂಗ್‌ನಂತೆ ವಕಾಲತ್ತು ಕೂಡಾ ವೃತ್ತಿಪರ ಕ್ಷೇತ್ರವಾಗಿ ಗುರುತಿಸಲ್ಪಟ್ಟಿದೆ. ವಕೀಲರಾಗಿ ಕಾನೂನಿನ ನೆರವು ನೀಡುವುದು ಅಥವಾ ವಕಾಲತ್ತು ವಹಿಸಿಕೊಳ್ಳುವುದು ವೃತ್ತಿ ಧರ್ಮವಾದರೂ, ಹಣದ ಕಡೆಗೆ ಒತ್ತು ಕೊಡದೆ ಗುಣದ ಕಡೆಗೆ ಒತ್ತು ಕೊಟ್ಟು ಪವಿತ್ರವಾದ ವಕೀಲ ವೃತ್ತಿಯನ್ನು ನಿರ್ವಹಿಸುವ ಅಗತ್ಯ ಸಮಾಜದಲ್ಲಿದೆ. ಈ ನಿಟ್ಟಿನಲ್ಲಿ ಯುವ ವಕೀಲರು ಸಮಾಜಮುಖಿ ಚಿಂತನೆ, ರಾಷ್ಟ್ರಾಭಿಮಾನದ ಚಿಂತನೆಯೊಂದಿಗೆ ಕಾರ್ಯಪ್ರವೃತ್ತರಾಗಬೇಕು ಎಂದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ಆಡಳಿತ ಮಂಡಳಿಯ ಸಂಚಾಲಕ ವಿಜಯ ನಾರಾಯಣ ಕೆ.ಎಂ ಉಪಸ್ಥಿತರಿದ್ದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಕೆ.ಜಿ. ಕೃಷ್ಣಮೂರ್ತಿ ಸ್ವಾಗತಿಸಿ, ಆಡಳಿತ ಮಂಡಳಿ ಸದಸ್ಯ ಹಾಗೂ ನ್ಯಾಯವಾದಿ ಮಂಜುನಾಥ ಎನ್.ಎಸ್ ವಂದಿಸಿದರು. ಉಪನ್ಯಾಸಕಿ ಅನ್ನಪೂರ್ಣ ವಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.