ಯಾವುದೇ ವಿಚಾರವನ್ನು ಸಂಶ್ಲೇಷಿಸಿ, ತೀರ್ಮಾನಿಸಿ :ಅಣ್ಣಾಮಲೈ
ಮೂಡುಬಿದಿರೆ, ಮಾ. 24: "ಯಾವುದೇ ವಿಚಾರವನ್ನು ಚರ್ಚಿಸದೆ, ಸಂಶ್ಲೇಷಿಸದೆ ನಿರ್ಧಾರ ತೆಗೆದುಕೊಳ್ಳುವುದರಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ಭವಿಷ್ಯತ್ತಿ ನಲ್ಲಿ ಅಪಾಯ ಎದುರಾಗಬಹುದು" ಎಂದು ಚಿಕ್ಕಮಗಳೂರಿನ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಅಭಿಪ್ರಾಯಪಟ್ಟರು.
ಅದಾನಿ ಸಂಸ್ಥೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ವಿದ್ಯಾರ್ಥಿ ವೇದಿಕೆ ಹಾಗೂ ದಿ ಹಿಂದೂ ಗ್ರೂಪ್ ಆಫ್ ಮೀಡಿಯಾ ಸಂಯುಕ್ತ ಆಶ್ರಯದಲ್ಲಿ ದಿ ಹಿಂದೂ- ಅಂತರ್-ಕಾಲೇಜು ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯನ್ನು ಆಯೋಜಿಸಿತ್ತು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ಚರ್ಚೆ ಎಂಬುದು ಈ ಪ್ರಜಾಪ್ರಭುತ್ವ ಹಾಗೂ ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಯಾವುದೇ ವೃತ್ತಿಯಲ್ಲಿ ನಾವು ತೊಡಗಿಸಿಕೊಂಡಿದ್ದರೂ, ಒಂದು ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಮುನ್ನ ಮಾತುಕತೆಯ ಮೂಲಕ ಅದನ್ನು ಚರ್ಚಿಸಬೇಕು. ಎಲ್ಲಾ ಆಯಾಮಗಳಿಂದ ಅದನ್ನು ಪರಿಗಣಿಸಿ ತೀರ್ಮಾನಿಸುವುದು ಅಗತ್ಯ. ಚರ್ಚೆಗಳಿಂದ ಯಾವುದೇ ವಿಚಾರದಲ್ಲಿ ಉತ್ತಮ ಫಲಿತಾಂಶ ಹೊರತರುವಲ್ಲಿ ನಾವು ಸಫಲರಾಗುತ್ತೇವೆ" ಎಂದು ಹೇಳಿದರು.
ಚರ್ಚೆಗಳ ಪ್ರಾಮುಖ್ಯತೆಯ ಕುರಿತು ಮಾತನಾಡಿ "ಈ ರೀತಿಯ ಸ್ಪರ್ಧೆಗಳು ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತವೆ. ಸೋಲು-ಗೆಲುವು ಇಲ್ಲಿ ಮುಖ್ಯವಾಗುವುದಿಲ್ಲ. ಇಂತಹ ಸ್ಪರ್ಧೆಗಳು ನಮ್ಮನ್ನು ಮತ್ತಷ್ಟು ಕೌಶಲ್ಯಪೂರ್ಣಗೊಳಿಸುತ್ತವೆ. ನಮ್ಮ ಚಿಂತನೆಯನ್ನು ಇನ್ನಷ್ಟು ತೀಕ್ಷ್ಣಗೊಳಿಸುತ್ತವೆ. ಚರ್ಚೆಗಳು ವಿಚಾರದ ಬಗೆಗೆ ಪರಿಪೂರ್ಣತೆ ಹೊಂದಲು ಸಹಾಯ ಮಾಡುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಇದರಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು" ಎಂದುಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ "ಯಾವ ಪತ್ರಿಕೆಯೂ ನೀಡದಂತಹ ವಿಶ್ಲೇಷಣೆ ಇಂದಿನ ಯುವ ವಿದ್ಯಾರ್ಥಿಗಳು ನೀಡುತ್ತಿರುತ್ತಾರೆ. ಅವರ ವಿಚಾರ ವೈಖರಿಯಿಂದ ಕೆಲವೊಮ್ಮೆ ನಾನೂ ಬೆರಗಾಗಿದ್ದೇನೆ. ಹಾಗಾಗಿ ಅಂತಹ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿಕೊಡುವುದು ಅಗತ್ಯ. ಈ ರೀತಿಯ ಸ್ಪರ್ಧೆಗಳು ಅದಕ್ಕೆ ಪೂರಕ" ಎಂದು ತಿಳಿಸಿದರು.
ದಿ ಹಿಂದೂ ಪತ್ರಿಕೆಯ ಮಂಗಳೂರು ಶಾಖೆಯ ಸಹಾಯಕ ವ್ಯವಸ್ಥಾಪಕ ಮ್ಯಾಥಿವ್ ಮತ್ತು ದಿ ಹಿಂದೂ ಪತ್ರಿಕೆಯ ಇತರ ಕಾರ್ಯಕಾರಿಣಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.