"ಆಳ್ವಾಸ್ ಆವಿಷ್ಕಾರ್"-ರಾಜ್ಯ ಮಟ್ಟದ ಕಾರ್ಯಗಾರ
ಮೂಡುಬಿದಿರೆ, ಮಾ.24: ಆಳ್ವಾಸ್ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಸಂಚಲನ ಇದರ ಸಂಯೋಜನೆಯಲ್ಲಿ ಆಳ್ವಾಸ್ ಆವಿಷ್ಕಾರ್ ಎಂಬ ಹೆಸರಿನಡಿಯಲ್ಲಿ ಶಿಕ್ಷಣ ಮತ್ತು ಬೆಳವಣಿಗೆ ಸಂಪರ್ಕ ಮತ್ತು ಪರಿಣಾಮಗಳು ಕುರಿತು ರಾಜ್ಯ ಮಟ್ಟದ ಪೇಪರ್ ಪ್ರಸಂಟೇಶನ್ ಕಾರ್ಯಗಾರವನ್ನು ಪಿ.ಜಿ ಸೆಮಿನಾರ್ ಹಾಲ್‌ನಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಡಾ.ಎಂ ಪ್ರಭಾಕರ್ ಜೋಶಿ ಉದ್ಘಾಟಿಸಿ, ಶಿಕ್ಷಣದ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದ್ದು, ಯುವಜನತೆಗೆ ಸಾಧಿಸುವ ಛಲವೊಂದಿದ್ದರೆ ಅವರು ಏನನ್ನು ಕೂಡ ಸಾಧಿಸಬಲ್ಲರು. ಶಿಕ್ಷಣ, ಸಾಂಸ್ಕೃತಿಕ, ಕ್ರೀಡೆ, ಬ್ಯಾಂಕಿಂಗ್, ಪ್ರಿಂಟಿಂಗ್ ಈ ಎಲ್ಲಾ ಕ್ಷೇತ್ರಗಳಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ದೊಡ್ಡದು. ಇಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಂಸ್ಥೆಗಳು ಸರಕಾರದ ಯಾವುದೇ ಸೌಲಭ್ಯವಿಲ್ಲದೆ ತಲೆಎತ್ತಿ ನಿಂತಿವೆ. ಮಣಿಪಾಲ, ಧರ್ಮಸ್ಥಳ ಹಾಗೂ ಆಳ್ವಾಸ್ ಕಾಲೇಜು ಶಿಕ್ಷಣ ಕ್ಷೇತ್ರಕ್ಕೆ ಮಾದರಿಯಾದ 3 ಸಂಸ್ಥೆಗಳಾಗಿವೆ. ಇವೆಲ್ಲವುಗಳಿಗೆ ಡಾ. ಎಂ ಮೋಹನ್ ಆಳ್ವ ಉತ್ತಮ ಮಾದರಿಯಾಗಿದ್ದಾರೆ. ಸ್ಪರ್ಧೆ ಎನ್ನುವುದು ಕೇವಲ ಗೆಲುವು ಅಲ್ಲ ಬದಲಾಗಿ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಸ್ಟೀಫನ್ ಹಾಕಿಂಗ್ ಗಾಳಿಕುರ್ಚಿಯಲ್ಲಿ ಕೂತು ಕೇವಲ ಮೆದುಳು ಹಾಗೂ ಬೆರಳಿನ ಮೂಲಕ ಇಡೀ ಪ್ರಪಂಚವೇ ಅಚ್ಚರಿಯಾಗುವಂತಹ ಸಾಧನೆ ಮಾಡಿದ್ದಾರೆ. ಅವರೇ ಯುವಜನತೆಗೆ ಸ್ಪೂರ್ತಿ. ಯುವಮನಸ್ಸು ಇತರರಿಗೆ ಸ್ಪೂರ್ತಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಮ್ಯಾನೆಜ್‌ಮೆಂಟ್ ವಿಭಾಗದ ಮುಖ್ಯಸ್ಥೆ ಸುರೇಖಾ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಅಶೋಕ್ ಕೆ.ಜಿ ಉಪಸ್ಥಿತರಿದ್ದರು. ಪವಿತ್ರ ನಾಯಕ್ ನಿರೂಪಿಸಿ, ಗಾಯಿತ್ರಿ ಸನಿಲ್ ವಂದಿಸಿದರು.