ಸುಳ್ಯ ಕ್ಷೇತ್ರವನ್ನೂ ಕಾಂಗ್ರೆಸ್ ಗೆಲ್ಲಲಿದೆ: ಸಚಿವ ರೈ

Update: 2018-03-24 18:16 GMT

ಮಂಗಳೂರು, ಮಾ. 24: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸುಳ್ಯ ಕ್ಷೇತ್ರವನ್ನೂ ಗೆಲ್ಲಲಿದೆ. ಅಲ್ಲಿನ ಬಿಜೆಪಿಯ ಪ್ರಸಕ್ತ ಶಾಸಕರೇ ಇದಕ್ಕೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಹಿಂದೆ ಬಿಜೆಪಿಯ ಉಸ್ತುವಾರಿ ಸಚಿವರು ಸುಳ್ಯ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂಬುದು ಜನರಿಗೆ ತಿಳಿದಿದೆ. ಸುಳ್ಯದಲ್ಲಿ ಪಶು ವೈದ್ಯಕೀಯ ಕಾಲೇಜು, ಕಡಬ ಪ್ರತ್ಯೇಕ ತಾಲೂಕು ಆಗಿ ಘೋಷಣೆ ಹಾಗೂ ಇತರ ಹಲವಾರು ಅಭಿವೃದ್ಧಿ ಕಾಮಗಾರಿಗನ್ನು ಆ ಕ್ಷೇತ್ರದಲ್ಲಿ ಮಾಡಲಾಗಿದೆ. ಇವೆಲ್ಲಾ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಪೂಕವಾಗಲಿದೆ ಎಂದವರು ಹೇಳಿದರು.

ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಮತ್ತೆ ದ.ಕ. ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಇತ್ತೀಚಿನ ಅವರ ಕರಾವಳಿ ಭೇಟಿಗೆ ನಿರೀಕ್ಷೆಗೂ ಮೀರಿ ಜನಬೆಂಬಲ ದೊರಕಿದೆ. ಅವರ ಭೇಟಿ ಪಕ್ಷದ ಬಲವರ್ದನೆಗೆ ಉತ್ತೇಜನ ನೀಡಿದೆ. ರಾಜ್ಯದ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದ ಸರಕಾರ ಎಂಬುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಆದರೆ ಕೇಂದ್ರದ ಸರಕಾರ ಚುನಾವಣೆಗೆ ಮುನ್ನ ತಾವು ಅಧಿಕಾರಕ್ಕೆ ಬಂದರೆ 100 ದಿನಗಳ ಒಳಗೆ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಎಲ್ಲರ ಖಾತೆಗೂ 15 ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ತಿಳಿಸಿತ್ತು. ಇದು ಗುಡ್ಡೆಯನ್ನು ಅಗೆದು ಇಲಿಯನ್ನು ಹಿಡಿದಂತೆ ಎಂಬ ಗಾದೆಯಂತೆ ಎಂಬುದು ಅರ್ಥಶಾಸ್ತ್ರಜ್ಞನಿಗೂ ತಿಳಿುುವ ವಿಚಾರ ಎಂದವರು ಹೇಳಿದರು.

ಗೋಷ್ಠಿಯಲ್ಲಿ ಮೇಯರ್ ಭಾಸ್ಕರ ಮೊಯ್ಲಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ನಾಯಕರಾದ ಇಬ್ರಾಹೀಂ ಕೋಡಿಜಾಲ್, ಕಣಚೂರು ಮೋನು, ಬಿ.ಕೆ. ಸಲೀಂ, ಕವಿತಾ ಸನಿಲ್, ಶಶಿಧರ ಹೆಗ್ಡೆ, ಬಿ.ಎಚ್. ಖಾದರ್, ಪದ್ಮನಾಭ ನರಿಂಗಾನ ಮೊದಲಾದವರು ಉಪಸ್ಥಿತರಿದ್ದರು.

ಲೆಕ್ಕ ಕೇಳಲು ಪ್ರಧಾನಿ ಮೋದಿ ಚಕ್ರವರ್ತಿಯಲ್ಲ!
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಭೇಟಿ ಸಂದರ್ಭ ಲೆಕ್ಕ ಕೊಡಿ ಎಂದು ಕೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯವೊಂದರಿಂದ ಪ್ರಧಾನಿಯೊಬ್ಬರು ಸಾಮಂತ ರಾಜರಿಂದ ಕಪ್ಪ ಕೇಳಿದಂತೆ ಲೆಕ್ಕ ಕೊಡಿ ಎಂದ ಕೇಳಲು ಅವರು ಚಕ್ರವತಿಯಲ್ಲ. ದೇಶವನ್ನು ಸುಧೀರ್ಘವಾಗಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಯಾವತ್ತೂ ರಾಜ್ಯಗಳಿಂದ ಲೆಕ್ಕ ಕೇಳಿಲ್ಲ. ನುಡಿದಂತೆ ನಡೆಯದ ಕೇಂದ್ರ ಸರಕಾರದ ಲೆಕ್ಕವನ್ನು ಜನರೇ ಕೇಳಲು ಆರಂಭಿದ್ದಾರೆ ಎಂದು ಸಚಿವ ರೈ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News