×
Ad

ಚುನಾವಣಾ ಘೋಷಣೆ ಹಿನ್ನೆಲೆ: ಗೊಂದಲಕ್ಕೀಡಾದ ಜಿ.ಪಂ. ಸಾಮಾನ್ಯ ಸಭೆ !

Update: 2018-03-27 17:44 IST

ಮಂಗಳೂರು, ಮಾ. 27: ರಾಜ್ಯದಲ್ಲಿ ಮೇ 12ರಂದು ವಿಧಾನಸಭಾ ಚುನಾವಣೆ ಘೋಷಣೆಗೊಂಡು ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ಇಂದು ನಿಗದಿಯಾಗಿದ್ದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಗೊಂದಲದ ಗೂಡಾಯಿತು. 

ಇಂದು ಬೆಳಗ್ಗೆ 11 ಗಂಟೆಗೆ ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯನ್ನು ನಿಗದಿಪಡಿಸಲಾಗಿತ್ತು. ಬೆಳಗ್ಗೆ 11ರ ಸುಮಾರಿಗೆ ಹೊಸದಿಲ್ಲಿಯಲ್ಲಿ ಚುನಾವಣಾ ಆಯುಕ್ತರು ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸಿ ನೀತಿಸಂಹಿತೆ ಈ ಕ್ಷಣದಿಂದ ಅನ್ವಯವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಮಧ್ಯೆ ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ದ.ಕ. ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ 11.15ರ ಸುಮಾರಿಗೆ ಆರಂಭಗೊಂಡಿತು. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್ ರವಿ ಅವರ ಅನುಪಸ್ಥಿತಿಯಲ್ಲಿ ಅಧಿಕಾರಿ ಎಂ.ವಿ.ನಾಯಕ್ ಅವರು ಸಭೆ ಆರಂಭಿಸಿದರು. 

ಆರಂಭದಲ್ಲಿ ‘ಈಗ ರಾಷ್ಟ್ರಗೀತೆ’ ಎಂದು ಹೇಳಿದ ಅಧಿಕಾರಿಗಳು ತಕ್ಷಣ ‘ಈಗ ನಾಡಗೀತೆ’ ಎಂದು ಸರಿಪಡಿಸಿಕೊಂಡು ಸಭೆಗೆ ಚಾಲನೆ ನೀಡಿದರು. ಆರಂಭದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆದರೆ, 12.10ಕ್ಕೆ ಸಭೆಯಲ್ಲಿ ಮಾತನಾಡಿದ ಅಧಿಕಾರಿ, ‘ಈಗಾಗಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ನನಗೆ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದಾರೆ. ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ’ ಎಂದು ಸಭೆಯ ಗಮನಕ್ಕೆ ತಂದರು.

ಅಧಿಸೂಚನೆ ಪ್ರಕಟವಾಗಿರುವಾಗ ಯಾವುದೇ ತೀರ್ಮಾನ ಹಾಗೂ ನಿರ್ಣಯ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದಾದರೆ ಸಭೆಯ ಅಗತ್ಯತೆ ಏನು ಎಂದು ಸದಸ್ಯರು ಪ್ರಶ್ನಿಸಿದರು. ಈ ಮಧ್ಯೆಯೇ ಸಾರ್ವಜನಿಕ ಸಂಬಂಧಿತ ಅಗತ್ಯ ವಿಚಾರದ ಬಗ್ಗೆ ಸದಸ್ಯರು ಮಾತನಾಡಿದರು. ಕೆಲವು ಹೊತ್ತಿನ ಬಳಿಕ ಸದಸ್ಯರು ಮಾತನಾಡಿ ‘ಕ್ರೀಯಾಯೋಜನೆ ಅನುಮೋದನೆ ಆಗುವುದಿಲ್ಲ ಎಂದಾದರೆ ಸಭೆ ನಡೆಸುವ ಅಗತ್ಯವೇನು?’ ಎಂದು ಹೇಳಿದಾಗ, ‘ಊಟದ ವ್ಯವಸ್ಥೆ ಇದೆ. ಎಲ್ಲರೂ ಸ್ವೀಕರಿಸಿ’ ಎಂದು ಅಧಿಕಾರಿ ಮಾತನಾಡಿ, ಮಧ್ಯಾಹ್ನ 12.55ಕ್ಕೆ ಸಭೆಗೆ ವಿರಾಮ ಹಾಕಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News