×
Ad

ಬಿಜೆಪಿ-ಆರೆಸ್ಸೆಸ್ ಪ್ರಭಾವ ಬಿಹಾರದ ಕೋಮು ಸೌಹಾರ್ದವನ್ನು ಹಾಳುಗೆಡವುತ್ತಿದೆ: ಕಾಂಗ್ರೆಸ್

Update: 2018-03-27 18:17 IST

ಪಟ್ನಾ, ಮಾ.27: ಬಿಜೆಪಿ ಮತ್ತು ಆರೆಸ್ಸೆಸ್ ನ ಹೆಚ್ಚುತ್ತಿರುವ ಪ್ರಭಾವ ಬಿಹಾರದಲ್ಲಿ ಕೋಮು ಸೌಹಾರ್ದವನ್ನು ಹಾಳುಗೆಡವುತ್ತಿದೆ. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತ್ರ ಯಾವ ಕ್ರಮವನ್ನೂ ಕೈಗೊಳ್ಳದ ಅಸಮರ್ಥತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ. ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಬಾರ ಮುಖ್ಯಸ್ಥ ಕೌಕಬ್ ಖಾದ್ರಿ ನೇತೃತ್ವದ ತಂಡ ಮಂಗಳವಾರದಂದು ರಾಜ್ಯಪಾಲ ಸತ್ಯಪಾಲ್ ಮಲಿಕ್‌ರನ್ನು ಭೇಟಿಯಾಗಿ ರವಿವಾರದಂದು ಔರಂಗಬಾದ್‌ನಲ್ಲಿ ರಾಮ ನವಮಿಯ ಮೆರವಣಿಗೆಯ ವೇಳೆ ನಡೆದ ಹಿಂಸಾಚಾರದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಮತ್ತು ಬಾದಿತ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸುವಂತೆ ಮನವಿ ಮಾಡಿದರು.

ರಾಜ್ಯಪಾಲರು ನಮ್ಮ ಮನವಿಯನ್ನು ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ನಮ್ಮ ಅನಿಸಿಕೆಯ ಪ್ರಕಾರ, ಬಿಹಾರದಲ್ಲಿ ಕೋಮು ಸೌಹಾರ್ದ ಕದಡಲು ಇಲ್ಲಿ ಹೆಚ್ಚುತ್ತಿರುವ ಬಿಜೆಪಿ- ಆರೆಸ್ಸೆಸ್ ಪ್ರಭಾವವೇ ಕಾರಣ. ಅದು ರಾಜ್ಯವನ್ನು ತನ್ನದೇ ರೀತಿಯ ರಾಜಕೀಯದ ಪ್ರಯೋಗಶಾಲೆಯಾಗಿ ಬಳಸಲು ಬಯಸುತ್ತಿದೆ ಎಂದು ಖಾದ್ರಿ ಆರೋಪಿಸಿದ್ದಾರೆ. ಔರಂಗಬಾದ್‌ನಲ್ಲಿ ಈ ಹಿಂದೆ ಎಂದೂ ಕೋಮು ಹಿಂಸಾಚಾರ ನಡೆದ ಉದಾಹರಣೆಗಳಿಲ್ಲ. ರಾಮ ನವಮಿಯಂದು ರಾಜ್ಯದ ಇತರೆಡೆಗಳಿಂದ ಮಾತ್ರವಲ್ಲ ಹೊರರಾಜ್ಯಗಳಿಂದಲೂ ಜನರು ಆಗಮಿಸಿದ್ದರು ಎಂದು ಖಾದ್ರಿ ತಿಳಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಅಸಮರ್ಥರಾಗಿ ಕೈಕಟ್ಟಿ ಕುಳಿತಿರುವುದು ರಾಜ್ಯದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತಿದೆ ಎಂದು ಬಿಪಿಸಿಸಿ ಮುಖ್ಯಸ್ಥ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News