ಕಾವೇರಿ ಮಂಡಳಿ ರಚನೆಗೆ ನೀತಿ ಸಂಹಿತೆಯಿಂದ ಪರಿಣಾಮವಿಲ್ಲ: ರಾವತ್
ಹೊಸದಿಲ್ಲಿ, ಮಾ.27: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯ ರಚನೆ ಪ್ರಕ್ರಿಯೆಗೆ ಮಾದರಿ ನೀತಿ ಸಂಹಿತೆ ಪರಿಣಾಮ ಬೀರದು ಎಂದು ಮುಖ್ಯ ಚುನಾವಣಾಧಿಕಾರಿ ಒ.ಪಿ.ರಾವತ್ ಹೇಳಿದ್ದಾರೆ.
ಕರ್ನಾಟಕ, ತಮಿಳುನಾಡು ಹಾಗೂ ಇತರ ಕೆಲವು ರಾಜ್ಯಗಳಿಗೆ ಕಾವೇರಿ ನದಿ ನೀರು ಹಂಚಿಕೆಗೆ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಇದೀಗ ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಮಂಡಳಿ ರಚನೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರಾವತ್, ನ್ಯಾಯಾಲಯದ ನಿರ್ದೇಶನ ಹಾಗೂ ಅದರ ಅನುಸರಣೆ ಪ್ರಕ್ರಿಯೆಗೆ ಆಯೋಗ ಅಥವಾ ನೀತಿ ಸಂಹಿತೆ ಅಡ್ಡಿಯಾಗದು ಎಂದುತ್ತರಿಸಿದರು.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ನ್ಯಾಯಪೀಠವು ಕಾವೇರಿ ನದಿ ನೀರು ವಿವಾದದ ಬಗ್ಗೆ ಫೆ.16ರಂದು ತೀರ್ಪು ಪ್ರಕಟಿಸಿತ್ತು. ಇದರಂತೆ ತಮಿಳುನಾಡಿಗೆ 404.25 ಟಿಎಂಸಿ, ಕರ್ನಾಟಕಕ್ಕೆ 284.75 ಟಿಎಂಸಿ, ಕೇರಳಕ್ಕೆ 30 ಟಿಎಂಸಿಟಿ ಹಾಗೂ ಪುದುಚೇರಿಗೆ 7 ಟಿಎಂಸಿಟಿ ನೀರು ಹಂಚಿಕೆಯಾಗಿದೆ. 2007ರಲ್ಲಿ ಕಾವೇರಿ ನೀರು ವಿವಾದ ಮಂಡಳಿ ನೀಡಿದ್ದ ಅಂತಿಮ ಆದೇಶಕ್ಕಿಂತ ತಮಿಳುನಾಡಿಗೆ 14.75 ಟಿಎಂಸಿ ನೀರು ಕಡಿಮೆ ದೊರೆತಿದ್ದು ಈ ಆದೇಶ 15 ವರ್ಷದವರೆಗೆ ಅನ್ವಯಿಸುತ್ತದೆ. ಈ ತೀರ್ಪನ್ನು ಜಾರಿಗೊಳಿಸಲು ಯೋಜನೆಯೊಂದನ್ನು ರಚಿಸುವಂತೆ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.