×
Ad

ಲೋಕಸಭೆ: ಅವಿಶ್ವಾಸ ಗೊತ್ತುವಳಿ ಕೈಗೆತ್ತಿಕೊಳ್ಳದೆ ಕಲಾಪ ಮುಂದೂಡಿಕೆ

Update: 2018-03-27 19:37 IST

ಹೊಸದಿಲ್ಲಿ, ಮಾ.27: ಲೋಕಸಭೆಯಲ್ಲಿ ವಿಪಕ್ಷ ಸದಸ್ಯರ ಗದ್ದಲ ಮುಂದುವರಿದ ಕಾರಣ ಸರಕಾರದ ವಿರುದ್ಧ ಸಲ್ಲಿಸಲಾಗಿರುವ ಅವಿಶ್ವಾಸ ಗೊತ್ತುವಳಿಯ ನೋಟಿಸನ್ನು ಕೈಗೆತ್ತಿಕೊಳ್ಳಲು ಅಸಾಧ್ಯವಾಗಿದೆ ಎಂದು ಹೇಳಿರುವ ಸ್ಪೀಕರ್ ಸುಮಿತ್ರಾ ಮಹಾಜನ್, ಕಲಾಪವನ್ನು ಮುಂದೂಡಿದರು.

ಸದನದಲ್ಲಿ ಅವಿಶ್ವಾಸ ಗೊತ್ತುವಳಿ ನೋಟಿಸ್‌ಗೆ ಕನಿಷ್ಟ 50 ಸದಸ್ಯರ ಬೆಂಬಲವಿದ್ದರೆ ಮಾತ್ರ ಅದನ್ನು ಸ್ವೀಕರಿಸಿ ಚರ್ಚೆಗೆ ಎತ್ತಿಕೊಳ್ಳಬಹುದು. ಆದರೆ ಅಧಿವೇಶನ ಆರಂಭವಾದಂದಿನಿಂದ ಸದನದಲ್ಲಿ ವಿರೋಧ ಪಕ್ಷಗಳು ಗದ್ದಲ, ಪ್ರತಿಭಟನೆ ನಡೆಸುತ್ತಿರುವ ಕಾರಣ ಕಲಾಪ ಅಸ್ತವ್ಯಸ್ತವಾಗಿದೆ. ಸದನ ಸುಸ್ಥಿತಿಗೆ ಬಂದು, ಬೆಂಬಲಿತ ಸದಸ್ಯರ ಸಂಖ್ಯೆ ತನಗೆ ಮನವರಿಕೆ ಆಗುವವರೆಗೆ ಅವಿಶ್ವಾಸ ಗೊತ್ತುವಳಿ ನೋಟಿಸನ್ನು ಸ್ವೀಕರಿಸಲು ಆಗದು ಎಂದು ಸ್ಪೀಕರ್ ತಿಳಿಸಿದರು. ಮಂಗಳವಾರ ಕಾಂಗ್ರೆಸ್, ಎಡಪಕ್ಷಗಳು ಹಾಗೂ ಇತರ ಕೆಲ ಪಕ್ಷಗಳ ಸದಸ್ಯರು ನೀಲಿ ಬಣ್ಣದ ಭಿತ್ತಿಫಲಕ ಹಿಡಿದುಕೊಂಡು, ಅವಿಶ್ವಾಸ ಗೊತ್ತುವಳಿಯನ್ನು ತಾವು ಬೆಂಬಲಿಸುತ್ತೇವೆ ಎಂದು ಫಲಕ ಪ್ರದರ್ಶಿಸಿದರು.

ಪ್ರತೀ ಫಲಕದಲ್ಲಿ ನಂಬರ್ ಇದ್ದು 1 ನಂಬರ್‌ನಿಂದ 80 ನಂಬರ್‌ನಷ್ಟು ಫಲಕಗಳು ಕಂಡು ಬಂದವು. ಆದರೆ ಇದನ್ನು ಸ್ಪೀಕರ್ ಪರಿಗಣಿಸಲಿಲ್ಲ. ಇದಕ್ಕೂ ಮೊದಲು ಸದನ ಸಮಾವೇಶಗೊಂಡು ಶೂನ್ಯವೇಳೆಯ ಕಲಾಪವನ್ನು ಕೈಗೆತ್ತಿಕೊಳ್ಳುವಂತೆಯೇ ಸದನದ ಬಾವಿಗೆ ಧಾವಿಸಿದ ಎಐಎಡಿಎಂಕೆ ಸದಸ್ಯರು ಕಾವೇರಿ ಜಲ ನಿರ್ವಹಣಾ ಮಂಡಳಿಯ ರಚನೆಗೆ ಆಗ್ರಹಿಸಿ ಘೋಷಣೆ ಕೂಗುತ್ತಾ ಗದ್ದಲ ಆರಂಭಿಸಿದರು. ಈ ಹಂತದಲ್ಲಿ ಇತರ ಕೆಲವು ವಿಪಕ್ಷಗಳ ಸದಸ್ಯರು ಅವಿಶ್ವಾಸ ಗೊತ್ತುವಳಿ ನೋಟಿಸ್ ಕೈಗೆತ್ತಿಕೊಳ್ಳಬೇಕೆಂದು ಘೋಷಣೆ ಕೂಗತೊಡಗಿದರು. ಅವಿಶ್ವಾಸ ಗೊತ್ತುವಳಿ ನೋಟಿಸನ್ನು ಕೈಗೆತ್ತಿಕೊಳ್ಳುವುದು ತನ್ನ ಕರ್ತವ್ಯವಾಗಿದೆ. ಆದರೆ ಸದನ ಸುಸ್ಥಿತಿಗೆ ಬರುವವರೆಗೆ ಇದು ಅಸಾಧ್ಯವಾಗಿದೆ ಎಂದು ತಿಳಿಸಿದ ಸ್ಪೀಕರ್ ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News