ಉಡುಪಿ: ದುರಂತಗಳಿಗೆ ಆಹ್ವಾನಿಸುತ್ತಿರುವ ಸರಕಾರಿ ತೆರೆದ ಬಾವಿಗಳು
ಉಡುಪಿ, ಮಾ.27: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹಲವಾರು ಸರಕಾರಿ ತೆರೆದ ಬಾವಿಗಳು ದುರಂತಗಳಿಗೆ ಆಹ್ವಾನ ನೀಡುವ ಸ್ಥಿತಿಯಲ್ಲಿರುವುದು ಕಂಡು ಬಂದಿದ್ದು, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ತೆರೆದ ಬಾವಿಗಳಿಗೆ ಸುರಕ್ಷತೆಯ ದೃಷ್ಟಿಯಿಂದ ಕಬ್ಬಿಣದ ಜಾಲರಿ ಅಳವಡಿಸುವಂತೆ ಸಾರ್ವ ಜನಿಕರು ಆಗ್ರಹಿಸಿದ್ದಾರೆ.
ಅಜ್ಜರಕಾಡು ಕಿತ್ತೂರು ಚೆನ್ನಮ್ಮ ರಸ್ತೆಯ ಬದಿಯಲ್ಲಿ ಮತ್ತು ಭುಜಂಗ ಪಾರ್ಕಿನ ಬಯಲು ರಂಗಮಂದಿರದ ಸಮೀಪ, ನಗರದ ಭಗತ್ ಸಿಂಗ್ ಮಾರ್ಗದಲ್ಲಿ ನೀರಿರುವ ತೆರೆದ ಬಾವಿಗಳಿವೆ. ಅದೇ ರೀತಿ ನಗರದ ಹೃದಯ ಭಾಗದಲ್ಲಿ ಇರುವ ನಾರ್ತ್ ಶಾಲೆಯ ಆವರಣದಲ್ಲಿ ಕುಸಿದಿರುವ ಸ್ಥಿತಿಯಲ್ಲಿ ಪಾಳುಬಿದ್ದ ಅಪಾಯಕಾರಿ ಬಾವಿಯೊಂದಿದೆ. ಇವುಗಳಿಗೆ ಯಾವುದೇ ಭದ್ರತೆಗಳಿಲ್ಲ. ಶಾಲಾ ಮಕ್ಕಳ ಕೂಡ ಈ ಪ್ರದೇಶದಲ್ಲಿ ಸಂಚರಿಸುತ್ತಿರುತ್ತಾರೆ.
ದೊಡ್ಡಣಗುಡ್ಡೆ ಪೊಲೀಸ್ ಮೈದಾನದಲ್ಲಿಯೂ ತೆರೆದ ಬಾವಿ ಇರುವುದು ಕಂಡು ಬಂದಿದೆ. ಹೀಗೆ ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವು ಅಪಾಯಕಾರಿ ತೆರೆದ ಬಾವಿಗಳಿವೆ. ಸ್ಥಳಿಯ ನಾಗರಿಕರು ಅಪಾಯಕಾರಿ ಬಾವಿಗಳ ಗುರುತಿಸಿ ಸ್ಥಳಿಯಾಡಳಿಗಳ ಗಮನಕ್ಕೆ ತರುವಂತೆ ಸಾಮಾಜಿಕ ಕಾರ್ಯಕರ್ತರಾದ ತಾರಾನಾಥ್ ಮೇಸ್ತ ಶಿರೂರು ಹಾಗೂ ನಿತ್ಯಾನಂದ ಒಳ ಕಾಡು ತಿಳಿಸಿದ್ದಾರೆ.
ಅನಿರೀಕ್ಷಿತ ದುರಂತಗಳು ಸಂಭವಿಸಿದ ನಂತರ ಏಚ್ಚೆತ್ತು ಕೊಳ್ಳುವ ಮೊದಲೇ ಜಾಗ್ರತೆ ವಹಿಸುವುದು ಸೂಕ್ತ. ಆದುದರಿಂದ ಜಿಲ್ಲಾಡಳಿತ ಅಸುರಕ್ಷಿತ ಸರಕಾರಿ ಬಾವಿಗಳನ್ನು ಗುರುತಿಸಿ ಸುವ್ಯವಸ್ಥಿತವಾದ ಜಾಲರಿ ಅಳವಡಿಸಬೇಕಾಗಿದೆ ಎಂದು ತಾರಾನಾಥ್ ಮೇಸ್ತ ಶಿರೂರು ಹಾಗೂ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.
ಸರಕಾರಿ ಪಾಳುಬಾವಿ ದುರಸ್ಥಿಗೆ ಆಗ್ರಹ
ಉಡುಪಿ ನಗರದಲ್ಲಿ 1923ರಲ್ಲಿ ಸ್ಥಾಪನೆಗೊಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ(ನಾರ್ತ್ ಶಾಲೆ) ವಠಾರದಲ್ಲಿ ಹಳೆಯ ಬಾವಿ ಇದ್ದು, ಅದು ಬಳಕೆಗೆ ಯೋ್ಯವಾಗಿರದೆ ಪಾಳು ಬಿದ್ದ ಸ್ಥಿತಿಯಲ್ಲಿದೆ.
ಬಾವಿ ದಂಡೆಯ ಸುತ್ತದ ತಳಭಾಗದ ಕಲ್ಲುಗಳು ಕುಸಿದ ಕಾರಣ ಸನಿಹ ಹೋಗಲು ಭಯದ ವಾತಾವರಣ ಎದುರಾಗಿದೆ. ಅದರೊಳಗೆ ಮರವೊಂದು ಬೆಳೆದ ನಿಂತ ಕಾರಣದಿಂದಾಗಿ ಒಣಗಿದ ಏಲೆಗಳು ಬಿದ್ದು ನೀರು ಕಲ್ಮಶ ಗೊಂಡಿದೆ. ಶಾಲಾ ವಠಾರದ ಬಾವಿ ದುರಸ್ಥಿ ಪಡಿಸಿದ್ದಲ್ಲಿ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿ ಊಟದ ತಯಾರಿಕೆಗೆ ಪಾತ್ರೆ ಪಗಡೆಗಳ ತೊಳೆಯಲು, ಶಾಲೆಯ ಹೂ ತೋಟದ ಗಿಡಗಳಿಗೆ ನೀರು ಉಣಿಸಲು ಉಪಯೋಗವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾವಿಯೊಳಗಿರುವ ಮರವನ್ನು ಕಡಿದು, ಶಿಥಿಲಗೊಂಡ ಬಾವಿಯ ದಂಡೆ ಯನ್ನು ದುರಸ್ಥಿ ಪಡಿಸಬೇಕು. ಕಶ್ಮಲಗೊಂಡ ನೀರನ್ನು ಖಾಲಿ ಮಾಡಿ, ಅದರ ಒಳಗೆ ಸಂಗ್ರಹಗೊಂಡ ಹೂಳನ್ನು ತೆಗೆಯಬೇಕು. ಆ ಮೂಲಕ ಜಲ ಮೂಲಗಳ ರಕ್ಷಣೆಯನ್ನು ಜಿಲ್ಲಾಡಳಿತ ಮಾಡಬೇಕಾಗಿದೆ ಎಂದು ತಾರಾನಾಥ್ ಮೇಸ್ತ ಶಿರೂರು ಒತ್ತಾಯಿಸಿದ್ದಾರೆ.